Thursday, 21st November 2024

ಶಿರಾಡಿ ಘಾಟ್ ಸಕಲೇಶಪುರ ದೊಡ್ಡ ತೆಪ್ಲೆಯಲ್ಲಿ ಭಾರಿ ಭೂಕುಸಿತ

ಮಂಗಳೂರು: ಮಂಗಳೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟ್ ಸಕಲೇಶಪುರ ದೊಡ್ಡ ತೆಪ್ಲೆಯಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, ಹಲವು ವಾಹನಗಳು ಮಣ್ಣಿನ ಅಡಿಯಲ್ಲಿ ಸಿಲುಕಿಕೊಂಡಿವೆ.

ತಕ್ಷಣದಿಂದ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಈ ಹೆದ್ದಾರಿಯಲ್ಲಿ ನಿರ್ಭಂಧಿಸ ಲಾಗಿದೆ.

ಎಡಬಿಡದೇ ಹಾಸನ ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದಲ್ಲಿ ಮಳೆ ಸುರಿಯುತ್ತಿದೆ. ಅಲ್ಲಲ್ಲಿ ಮರಗಳು ಉರುಳಿ ಸಂಚಾರಕ್ಕೆ ಅಡಚಣೆಯಾಗುತ್ತಲೇ ಇದೆ. ಮಂಗಳವಾರವೂ ಬೆಳಿಗ್ಗೆಯಿಂದ ಮಳೆ ಇದ್ದುದರಿಂದ ವಾಹಗಳ ಸಂಚಾರವೂ ನಿಧಾನವಾಗಿಯೇ ಇತ್ತು. ಇದರ ನಡುವೆ ಹಾಸನ ಜಿಲ್ಲೆಯ ಮಲೆನಾಡು ಹಾಗೂ ಘಟ್ಟದ ಪ್ರದೇಶವಾದ ಸಕಲೇಶಪುರ ತಾಲ್ಲೂಕಿನ ದೊಡ್ಡತಪ್ಪಲೆ ಬಳಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಮಂಗಳವಾರ ಮಧ್ಯಾಹ್ನ ಮತ್ತೆ ಭಾರೀ ಪ್ರಮಾಣದ ಭೂಕುಸಿತವಾಗಿದೆ. ಈ ವೇಳೆ ಒಂದು ಟ್ಯಾಂಕರ್‌, ಲಾರಿ ಉರುಳಿ ಬಿದ್ದಿವೆ. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಭಾರೀ ಮಳೆಯಿಂದ ಗುಡ್ಡದ ಕೆಲವು ಭಾಗ ಕುಸಿದು ಬಿದ್ದಿವೆ. ಈ ವೇಳೆ ಎರಡು ಕಾರು, ಒಂದು ಟ್ಯಾಂಕರ್ ಸೇರಿ ಆರು ವಾಹನಗಳು ಮಣ್ಣಿನಡಿ ಸಿಲುಕಿಕೊಂಡಿರುವುದು ಕಂಡು ಬಂದಿದೆ.ಕೂಡಲೇ ಮಾಹಿತಿ ನೀಡಿದ್ದರಿಂದ ರಕ್ಷಣಾ ಪಡೆಗಳು ಅಲ್ಲಿಗೆ ತೆರಳಿವೆ.

ಸಕಲೇಶಪುರ ತಾಲ್ಲೂಕಿನಲ್ಲಿ ಸತತ ಮಳೆಯ ಪರಿಣಾಮವಾಗಿ ಗುಡ್ಡ ಕುಸಿತ ಕಂಡು ಬಂದಿದೆ. ದೊಡ್ಡ ತೆಪ್ಲೆ ಪ್ರದೇಶದಲ್ಲಿ ನಿರಂತರವಾಗಿ ಬೆಟ್ಟದ ಮಣ್ಣು ಕುಸಿಯುತ್ತಲೇ ಇದ್ದು, ಆಗಾಗ ಮಣ್ಣು ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿತ್ತು.

ಈ ಬಾರಿ ಕೊಂಚ ಹೆಚ್ಚೇ ಮಣ್ಣು ಕುಸಿತ ಕಂಡು ಬಂದಿದೆ. ವಾಹನಗಳು ಸಂಚರಿಸುತ್ತಿರುವಾಗಲೇ ಮಂಗಳವಾರ ಮಧ್ಯಾಹ್ನದ ವೇಳೆ ಮತ್ತೆ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿತವಾಗಿದೆ. ಕೆಲ ಪ್ರಯಾಣಿಕರು ಕಾರಿನಲ್ಲೇ ಸಿಲುಕಿ ಹಾಕಿಕೊಂಡಿದ್ದಾರೆ. ಮಣ್ಣು ಬಿದ್ದ ರಭಸಕ್ಕೆ ಭಯಗೊಂಡಿದ್ದರೂ ಯಾರಿಗೂ ಅಪಾಯವಾಗಿಲ್ಲ.ರಕ್ಷಣಾ ಸಿಬ್ಬಂದಿಗಳು ಕೂಡಲೇ ಧಾವಿಸಿ ಹಿಟಾಚಿ, ಜೆಸಿಬಿ ಮೂಲಕ‌ ಮಣ್ಣು ತೆರವು ಮಾಡಿದರು. ಮಣ್ಣು ಕುಸಿದ ಪ್ರಮಾಣ ಕಡಿಮೆ ಇದೆ. ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿದಿದ್ದರೆ, ದೊಡ್ಡ ಅನಾಹುತ ಸಂಭವಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಕಾರಿನಲ್ಲಿದ್ದವರನ್ನು ಕೂಡಲೇ ಕೆಳಕ್ಕೆ ಇಳಿಸಿ ರಕ್ಷಿಸಲಾಯಿತು. ಅವರು ಕೂಡ ರಕ್ಷಣಾ ಸಿಬ್ಬಂದಿಗೆ ಧನ್ಯವಾದ ಹೇಳಿದರು. ಅದೇ ರೀತಿ ಟ್ಯಾಂಕರ್‌ ಅನ್ನು ರಕ್ಷಣೆ ಮಾಡಲಾಗಿದೆ.