Wednesday, 23rd October 2024

Shivarajkumar: ಕುತ್ತಾರಿನ ಕೊರಗಜ್ಜ ದೈವದ ದರ್ಶನ ಪಡೆದ ಶಿವರಾಜ್‌ಕುಮಾರ್‌ ದಂಪತಿ

Shivarajkumar

ಮಂಗಳೂರು: ತುಳುನಾಡಿನ ಕಾರ್ಣಿಕ ಶಕ್ತಿ ಕೊರಗಜ್ಜ ದೈವದ ಆದಿಸ್ಥಳ ಕುತ್ತಾರ್‌ಗೆ ನಟ ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ಶಿವರಾಜ್‌ ಕುಮಾರ್‌ (Shivarajkumar) ಅವರು ಸೋಮವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು, ಕರಾವಳಿಯಲ್ಲಿ ಹಲವಾರು ಪುಣ್ಯ ಕ್ಷೇತ್ರಗಳಿವೆ. ಆದರೆ ಇಲ್ಲಿಗೆ ಭೇಟಿ ನೀಡಿದಾಗ ಏನೋ ಒಂದು ನೆಮ್ಮದಿ ಸಿಗುತ್ತದೆ. ಕೊರಗಜ್ಜ ದೈವದ ಮೇಲೆ ನಂಬಿಕೆ ಇದೆ. ಜನರು ಕೂಡ ಈ ದೈವದ ಮೇಲೆ ಅಪಾರ ನಂಬಿಕೆ ಇಟ್ಟಿದ್ದಾರೆ. ಇಲ್ಲಿ ಬಂದು ಪ್ರಾರ್ಥನೆ ಸಲ್ಲಿಸಿದ್ದು, ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಹೇಳಿದರು.

ಈ ವೇಳೆ ಚಲನ ಚಿತ್ರ ನಿರ್ಮಾಪಕರಾದ ಕೆ.ಪಿ.ಶ್ರೀನಾಥ್, ರಾಜೇಶ್ ಭಟ್, ಕೀರ್ತನ್ ಪೂಜಾರಿ, ಶಿವರಾಜ್ ಕುಮಾರ್ ಅವರ ಸಂಬಂಧಿ ನಟರಾಜ್ , ಸ್ನೇಹಿತರಾದ ವಿಜಯಪ್ರಸಾದ್, ಶೇಖರ್, ಕೊರಗಜ್ಜ ಕ್ಷೇತ್ರದ ಆಡಳಿತ ಮೊಕ್ತೇಸರ ಪ್ರೀತಮ್ ಶೆಟ್ಟಿ, ಗಾಯಕ ಜಿತೇಶ್ ಕುಮಾರ್ ಉಪಸ್ಥಿತರಿದ್ದರು.

ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಗೀತಾ ಶಿವರಾಜ್ ಕುಮಾರ್ ಅವರ ನಿರ್ಮಾಣದ ನಟ ಶಿವರಾಜ್ ಕುಮಾರ್ ಅಭಿನಯದ ಹೊಸ ಚಲನಚಿತ್ರ ʼಬೈರತಿ ರಣಗಲ್ʼ ನ.15 ರಂದು ಕರ್ನಾಟಕದದ್ಯಾಂತ ಏಕಕಾಲದಲ್ಲಿ ಬಿಡುಗಡೆಯಾಗಲಿದ್ದು, ಚಿತ್ರ ಯಶಸ್ವಿಯಾಗಬೇಕು ಎಂಬ ಸಂಕಲ್ಪದಿಂದ ಕೊರಗಜ್ಜ ದೈವಕ್ಕೆ ಶಿವರಾಜ್‌ ಕುಮಾರ್‌ ದಂಪತಿ ಪೂಜೆ ಸಲ್ಲಿಸಿದ್ದಾರೆ.

ಭೈರತಿರಣಗಲ್ ಚಿತ್ರ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ಪಂಚ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಹಾಡುಗಳು ರಿಲೀಸ್ ಆಗಿದ್ದು, ಅ.20 ರಂದು ಟೀಸರ್ ಬಿಡುಗಡೆಯಾಗಲಿದೆ.

ಈ ಸುದ್ದಿಯನ್ನೂ ಓದಿ | BBK 11: ಬಕೆಟ್ ಹಿಡಿಯೋದು ಬಿಡು: ಬಿಗ್ ಬಾಸ್ ಮನೆಯಲ್ಲಿ ಅನುಷಾ-ಐಶ್ವರ್ಯ ನಡುವೆ ದೊಡ್ಡ ಜಗಳ

ನಿರ್ದೇಶಕ ನರ್ತನ್ ಹಾಗೂ ಶಿವಣ್ಣ ಅವರ ಕಾಂಬಿನೇಶನ್‌ನಲ್ಲಿ ಬಂದಿದ್ದ ʼಮಫ್ತಿʼ ಚಿತ್ರದ ಪ್ರೀಕ್ವೆಲ್ ಆಗಿರುವ ʼಭೈರತಿ ರಣಗಲ್ʼ ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಹಾಗೂ ಹಾಡಿನ ಮೂಲಕ ಜನಪ್ರಿಯವಾಗಿರುವ ಈ ಚಿತ್ರದ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

‘ಗೀತಾ ಪಿಕ್ಚರ್ಸ್​’ ಮೂಲಕ ಗೀತಾ ಶಿವರಾಜ್​ಕುಮಾರ್​ ಅವರು ‘ಭೈರತಿ ರಣಗಲ್​’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಶಿವರಾಜಕುಮಾರ್ ಅವರಿಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ಅಭಿನಯಿಸಿದ್ದಾರೆ. ರವಿ ಬಸ್ರೂರ್‌ ಅವರ ಸಂಗೀತ, ನವೀನ್ ಕುಮಾರ್ ಛಾಯಾಗ್ರಹಣ, ಆಕಾಶ್ ಹಿರೇಮಠ ಸಂಕಲನ, ‌ಗುಣ ಕಲಾ ನಿರ್ದೇಶನ ಹಾಗೂ ದಿಲೀಪ್ ಸುಬ್ರಹ್ಮಣ್ಯ, ಚೇತನ್ ಡಿಸೋಜ ಸಾಹಸ ನಿರ್ದೇಶನ ʼಭೈರತಿ ರಣಗಲ್ʼ ಚಿತ್ರಕ್ಕಿದೆ.