Sunday, 15th December 2024

ಸಿದ್ಧಗಂಗಾ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆದ ಹಾರ್ಟ್ ವಾಲ್ವ್ ರೀಪ್ಲೇಸ್ಮೆಂಟ್ ಸರ್ಜರಿ

ತುಮಕೂರು: ರಕ್ತ ಸಂಚಲನೆಗೆ ಸಹಾಯವಾಗುವ ಎದೆಯ ಕವಾಟ(ಹಾರ್ಟ್ ವಾಲ್ವ್) ಸರಿಯಾಗಿ ತೆರೆದುಕೊಳ್ಳದೆ ತೀವ್ರ ಎದೆನೋವು, ಉಬ್ಬಸ,ಸುಸ್ತು ಹಾಗೂ ತಲೆಸುತ್ತಿನಿಂದ ಬಳಲುತ್ತಿದ್ದ ಪಾವಗಡ ಮೂಲದ 60 ವರ್ಷದ ರಂಗಪ್ಪ ಎನ್ನುವವರಿಗೆ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಯಶಸ್ವಿ ತೆರೆದ ಹೃದಯ ಶಸ್ತ್ರಚಿಕಿತ್ಸೆಯಲ್ಲಿ ವಾಲ್ವ್ ರೀಪ್ಲೇಸ್ಮೆಂಟ್  ನಡೆಸಲಾಗಿದೆ.

ಈ ಬಗ್ಗೆ ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ಈಗಾಗಲೇ ಹೃದ್ರೋಗ ವಿಭಾಗದಲ್ಲಿ ಸಹಸ್ತ್ರಾರು ಜನರಿಗೆ ತಪಾಸಣೆ, ಶಸ್ತ್ರಚಿಕಿತ್ಸೆ ನಡೆಸಿ ಜನರ ವಿಶ್ವಾಸಕ್ಕೆ ಪಾತ್ರವಾಗಿದ್ದ ನಮ್ಮ ಆಸ್ಪತ್ರೆ ಇದೀಗ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಿ ಹೊಸ ಮೈಲಿ ಗಲ್ಲು ಸಾಧಿಸಿದ್ದು ಹೆಮ್ಮೆಯನಿಸಿದೆ. ಸಿದ್ಧಗಂಗಾ ಶ್ರೀವರ್ಯರ ಆಶೀರ್ವಾದದ ಫಲವೇ ಯಶಸ್ಸಿಗೆ ಕಾರಣ ಎಂದರು.

ರೋಗಿಗೆ ಬಿಪಿ ಹಾಗೂ ವಯೋಸಹಜ ಅಸ್ವಸ್ಥತೆಗಳು ಹೆಚ್ಚಾಗಿದ್ದವು. ತೆರೆದ ಹೃದಯ ಶಸ್ತ್ರಚಿಕಿತ್ಸೆಗಳಲ್ಲಿ 15 ವರ್ಷಗಳ ಅನುಭ ವುಳ್ಳ  ಕಾರ್ಡೀಯೋಥೊರಾಸಿಕ್ ಸರ್ಜನ್ ಡಾ.ರವಿಚಂದ್ರರವರ ಕಾರ್ಯದಕ್ಷತೆ ಅನುಭವ, ಸಿದ್ಧಗಂಗಾ ಆಸ್ಪತ್ರೆಯ ಹೃದ್ರೋಗ ವಿಭಾಗದ ಎಲ್ಲಾ ವೈದ್ಯಕೀಯ ಸಿಬ್ಬಂಧಿ ನೆರವಿನಿಂದ ಯಶಸ್ವಿಯಾಗಿ ಹೃದಯದ ಕವಾಟ(ವಾಲ್ವ್) ಬದಲಿಸಲಾಗಿದೆ. ರೋಗಿ ಈಗ ಸಂಪೂರ್ಣ ಚೇತರಿಕೆ ಹೊಂದಿದ್ದು ತಮ್ಮ ಮೊದಲಿನ ಜೀವನಕ್ಕೆ ಮರಳಿದ್ದಾರೆ ಎಂದು ಹೃದ್ರೋಗ ತಜ್ಞ ಡಾ.ಭಾನುಪ್ರಕಾಶ್ ಹೆಚ್.ಎಂ ತಿಳಿಸಿದರು.

ಡಾ.ರವಿಚಂದ್ರ ಮಾತನಾಡಿ ತೆರೆದ ಹೃದ್ರೋಗ ಶಸ್ತ್ರಚಿಕಿತ್ಸೆ ನಡೆಸುವುದು ಬಹಳ ಕಠಿಣವಾಗಿತ್ತು. ರೋಗಿಗೆ ಸತತ ಐದು ಗಂಟೆಗಳ ಕಾಲ ಸರ್ಜರಿ ನಡೆಸಲಾಯಿತು. ಬೈಪಾಸ್ ಸರ್ಜರಿ, ವಾಲ್ವ್ ರಿಪೇರ್ ಸೇರಿದಂತೆ ಜನ್ಮದಾತ ಹೃದಯರೋಗ ಸಮಸ್ಯೆಗಳಿಗೂ ನಮ್ಮಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ ಎಂದರು.