ತುಮಕೂರು: ವೈದ್ಯೆಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇಡೀ ಸಮಾಜವೇ ತಲೆತಗ್ಗಿಸುವಂತಹ ಘಟನೆಯಾಗಿದ್ದು ಆರೋಗ್ಯ ಕ್ಷೇತ್ರಕ್ಕೆ ಅಘಾತವಾಗಿದೆ ಎಂದು ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯದ ಕಾರ್ಯಕಾರಿ ನಿರ್ದೇಶಕ ಡಾ.ಸಚ್ಚಿದಾನಂದ್ ಎಸ್. ತಿಳಿಸಿದರು.
ಅವರು ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆವತಿಯಿಂದ ಕೊಲ್ಕತ್ತಾದ ಆರ್‌ಜಿಕಾರ್ ಆಸ್ಪತ್ರೆಯಲ್ಲಿ ನಡೆದ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ನಡೆದ ಮೌನಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ ವೈದ್ಯಕೀಯ ವ್ಯವಸ್ಥೆಗೆ ಭದ್ರತೆಯಿಲ್ಲದಿದ್ದರೆ ಇಡೀ ಸಮಾಜ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ.
ಕೊಲ್ಕತ್ತಾ ಘಟನೆಯ ಸಂಬಂಧ ಸುಪ್ರೀಂ ಕೋರ್ಟ್ ಸುಮೋಟೋ ಕೇಸ್ ದಾಖಲಿಸಿಕೊಂಡು ವಿಚಾರಣೆಗೆ ಮುಂದಾಗಿರುವುದು ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲಿನ ಗೌರವವನ್ನು ಹೆಚ್ಚಿಸಿದ್ದು, ಲೈಂಗಿಕ ದೌರ್ಜನ್ಯ ಹಾಗೂ ಕೊಲೆಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.
ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ ಡಾ.ಎಸ್.ಪರಮೇಶ್ ಮಾತನಾಡಿ ಮಹಿಳೆಯರನ್ನು ಗೌರವಿಸುವ ನೆಲದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ದುರದೃಷ್ಟಕರ, ಆರೋಪಿಗಳಿಗೆ ಶಿಕ್ಷೆಯ ಭಯವಿಲ್ಲದಿರುವುದು ಇಂತಹ ಘಟನೆಗಳಿಗೆ ಪ್ರೇರಣೆ ಒದಗಿಸುತ್ತಿದೆ. ಶೀಘ್ರ ವಿಚಾರಣೆ ನಡೆಸಿ ಗರಿಷ್ಠ ಮಟ್ಟದ ಶಿಕ್ಷೆ ನೀಡುವ ಮೂಲಕ ಇಂತಹ ಘಟನೆಗಳು ಮುಂದೆ ಎಂದೂ ಆಗದಂತೆ ಆದೇಶ ಕೊಡಬೇಕು ಎಂದು ಆಗ್ರಹಿಸಿದರು.
ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಶಾಲಿನಿ ಮಾತನಾಡಿ ಯಾವುದೇ ಮಹಿಳೆಯ ಮೇಲೆ ದೌರ್ಜನ್ಯ ನಡೆಯುವುದು ಕಂಡು ಬಂದರೆ ಇಡೀ ಸಮಾಜ ಒಟ್ಟುಗೂಡಬೇಕು. ವಿದ್ಯಾರ್ಥಿಗಳು ತಮ್ಮ ಸುತ್ತಲಿನ ಮಹಿಳೆಯರಿಗೆ ಗೌರವ ನೀಡುವುದರ ಜೊತೆಗೆ ಭದ್ರತೆಯ ಭರವಸೆಯನ್ನೂ ನೀಡಿದಾಗ ಮಾತ್ರ ಮಹಿಳೆಯ ಆತ್ಮಗೌರವಕ್ಕೆ ದಕ್ಕೆಯುಂಟಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಮೃತ ವೈದ್ಯೆಯ ಆತ್ಮಕ್ಕೆ ಮೌನಾಚರಣೆಯ ಮೂಲಕ ಶಾಂತಿಕೋರಲಾಯಿತು.
ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯದ ಸಿಇಓ ಡಾ.ಸಂಜೀವಕುಮಾರ್ ಮಾತನಾಡಿದರು. ವೈದ್ಯಕೀಯ ಅಧೀಕ್ಷಕ ಡಾ.ನಿರಂಜನ ಮೂರ್ತಿ, ನರ್ಸಿಂಗ್ ವಿಭಾಗದ ಮುಖ್ಯಸ್ಥ ನಾಗಣ್ಣ, ಹೆಚ್.ಆರ್. ನಾಗಭೂಷಣ್, ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಕಾಲೇಜಿನ ಉಪನ್ಯಾಸಕರು, ವೈದ್ಯರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.