ತುಮಕೂರು: ವೃದ್ಧಾಶ್ರಮಗಳಾಗುತ್ತಿರುವ ಗ್ರಾಮಗಳಲ್ಲಿ ಯುವ ವೈದ್ಯರು ಗ್ರಾಮದ ಮಕ್ಕಳಂತೆ ಕರ್ತವ್ಯ ನಿರ್ವಹಿಸಿ ವಯೋವೃದ್ಧರ, ಅಬಲರ ಆರೋಗ್ಯ ಸೇವೆ ಮಾಡಬೇಕು ಎಂದು ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಅರಳೂರು ಗ್ರಾಮದಲ್ಲಿ ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ ವತಿಯಿಂದ ಕುಟುಂಬ ಆರೋಗ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಗರದ ಮೇಲೆ ಮಕ್ಕಳ ಪ್ರೇಮ ಬೆಳೆದಂತೆಲ್ಲಾ ಪೋಷಕರನ್ನು ತಬ್ಬಲಿ ಮಾಡಿ ಹೋಗುವ ಬೆಳವಣಿಗೆಗಳು ಆತಂಕಕಾರಿಯಾಗಿದೆ ಎಂದರು.
ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ಮಾತನಾಡಿ ಸಿದ್ಧಗಂಗಾ ವೈದ್ಯಕೀಯ ಕಾಲೇಜು ತನ್ನ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ಜಿಲ್ಲೆಯಲ್ಲಿ ಕಳೆದ ವರ್ಷದಿಂದ ಈವರೆಗೂ 7 ಗ್ರಾಮಗಳನ್ನು ಆರೋಗ್ಯ ದತ್ತು ಪಡೆದುಕೊಂಡಿದ್ದು, ನಮ್ಮ ವೈದ್ಯರು ನಿರಂತರ ಗ್ರಾಮಕ್ಕೆ ಎಡತಾಕಿ ಆರೋಗ್ಯ ತಪಾಸಣೆ ಜಾಗೃತಿ ಮೂಡಿಸುತ್ತಿದ್ದಾರೆ ಎಂದರು.
ಸಿದ್ಧಗಂಗಾ ಮೆಡಿಕಲ್ ಕಾಲೇಜು ಪ್ರಾಚಾರ್ಯರಾದ ಡಾ.ಶಾಲಿನಿ ಮಾತನಾಡಿ, ಕುಟುಂಬ ಆರೋಗ್ಯ ದತ್ತು ಕಾರ್ಯಕ್ರಮದ ಅಡಿಯಲ್ಲಿ ನಮ್ಮ ವೈದ್ಯರು ಗ್ರಾಮದ ಮನೆ ಮನೆಯ ಆರೋಗ್ಯ ಸರ್ವೇ ಕಾರ್ಯ ನಡೆಸಲಿದ್ದು, ಅವಶ್ಯಕವೆನಿಸಿದರೆ ರೋಗಿಗಳನ್ನು ನಮ್ಮ ವೈದ್ಯಕೀಯ ಕಾಲೇಜಿನಲ್ಲಿ ದಾಖಲು ಮಾಡಿಕೊಂಡು ಹೆಚ್ಚಿನ ಚಿಕಿತ್ಸೆ ನೀಡಲಿದ್ದೇವೆ, ಇದು ನಿರಂತರವಾಗಿ ನಡೆಯಲಿದೆ ಎಂದರು.
ಸಿದ್ಧಗಂಗಾ ಆಸ್ಪತ್ರೆ ಸ್ಪೆಷಾಲಿಟಿ, ಸೂಪರ್ ಸ್ಪೆಷಾಲಿಟಿ ವಿಭಾಗದ ಸುಮಾರು 50 ಕ್ಕೂ ಹೆಚ್ಚು ವೈದ್ಯರು ಭಾಗವಹಿಸಿ ಗ್ರಾಮದ ಸುಮಾರು 300 ಕ್ಕೂ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ ನಡೆಸಿ, ಉಚಿತ ಔಷಧಿಗಳನ್ನು ಕೂಡ ವಿತರಿಸಿದರು.
ವೈದ್ಯಕೀಯ ಮೇಲ್ವಿಚಾರಕ ಡಾ.ನಿರಂಜನಮೂರ್ತಿ, ಕಮ್ಯುನಿಟಿ ಮೆಡಿಸಿನ್ ವಿಭಾಗದ ಮುಖ್ಯಸ್ಥರಾದ ಡಾ.ಶ್ವೇತಾ, ಅರಳೂರು ಗ್ರಾಪಂ ಅಧ್ಯಕ್ಷೆ ಮೇಘ ಲೋಕೇಶ್, ಉಪಾಧ್ಯಕ್ಷೆ ಕೃಷ್ಣಯ್ಯ, ಪಿಡಿಓ ಶಂಕರ್, ಅರಳೂರು ಗ್ರಾಮದ ಮುಖಂಡರಾದ ಶಂಕರಯ್ಯ, ಕುಮಾರಯ್ಯ, ರುದ್ರೇಶ್, ಹೊನ್ನೇಶ್ ಕುಮಾರ್, ಉಮಾಶಂಕರ್ ಸೇರಿದಂತೆ ಗ್ರಾಪಂನ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.