Thursday, 12th December 2024

ವೃತ್ತಿ ಮೌಲ್ಯ ಹೆಚ್ಚಿಸಿಕೊಳ್ಳಬೇಕು: ಸಿದ್ದಲಿಂಗ ಸ್ವಾಮೀಜಿ 

ತುಮಕೂರು: ಯಾವುದೇ ವೃತ್ತಿಯಲ್ಲಿ ಅಧ್ಯಯನ ಹಾಗೂ ಅಧ್ಯಾಪನವಿದ್ದರೆ ಆ ವೃತ್ತಿಯ ಮೌಲ್ಯವನ್ನು ಹೆಚ್ಚುವ ಜತೆಗೆ ಗುಣಾತ್ಮಕ ವ್ಯಕ್ತಿತ್ವವನ್ನು ಕೂಡ ರೂಪಿಸಿಕೊಳ್ಳಬಹುದು ಎಂದು ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.

ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ ವತಿಯಿಂದ ನಡೆದ ರಾಜ್ಯಮಟ್ಟದ ಫಾರ್ಮಕಾಲಜಿಸ್ಟ್‌ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ ವೈದ್ಯರ ನಿರಂತರ ಅಧ್ಯಯನದಿಂದ ರೋಗಿಗಳ ಆರೋಗ್ಯಮಟ್ಟವನ್ನು ಸುಧಾರಿಸಬಹುದು ಜೊತೆಗೆ ವೈದ್ಯಕೀಯ ಜಗತ್ತಿಗೆ ಹೊಸ ಪರಿಹಾರ ಹಾಗೂ ಅವಕಾಶಗಳನ್ನು ಸೃಷ್ಟಿಸಿಕೊಡಬಹುದು ಎಂದರು.

ಸಿದ್ಧಗಂಗಾ,ಶ್ರೀದೇವಿ,ಸಿದ್ಧಾರ್ಥ ಮೆಡಿಕಲ್‌ ಕಾಲೇಜುಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ವೈದ್ಯಕೀಯ ವೃತ್ತಿಯಲ್ಲಿ ನಾವೆಲ್ಲಾ ಒಂದೇ ದೃಷ್ಟಿಕೋನದಿಂದ ಸಾಗುವಂತೆ ಮಾಡಿದೆ. ಆರೋಗ್ಯ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆಗೆ ಪರಸ್ಪರ ಪೂರಕವಾಗಿ ಕರ್ತವ್ಯ ನಿರ್ವಹಿಸುವ ವಾತಾ ವರಣ  ಸೃಷ್ಟಿಯಾಗಲು ಇಂತಹ ವೇದಿಕೆಗಳು ಸಹಕಾರಿ ಎಂದರು.

ಮಾಜಿ ವಿಪ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್‌ ಮಾತನಾಡಿ, ವೈದ್ಯಕೀಯ ಕ್ಷೇತ್ರದ ನಿರಂತರ ಅಧ್ಯಯನದಿಂದ ಆರೋಗ್ಯ ಸಮಸ್ಯೆಗಳನ್ನು ಸುಧಾ ರಿಸುವುದಕ್ಕೆ ನವೀನ ತಂತ್ರಜ್ಞಾನಗಳ ಆವಿಷ್ಕಾರ ಆಗುತ್ತಿದೆ. ನೂತನ ವಿದ್ಯಮಾನಗಳು ಹಾಗೂ ತಂತ್ರಜ್ಞಾನಗಳ ಬಗ್ಗೆ ವೈದ್ಯರಿಗೆ ಪರಸ್ಪರ ಅರಿವು ಹಾಗೂ ಕಲಿಕೆಗೆ ಈ ಸಮ್ಮೇಳನ ಸಹಕಾರಿಯಾಗಿದೆ ಎಂದರು.

ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಎಸ್.ಪರಮೇಶ್‌  ಮಾತನಾಡಿ, ಸಿದ್ಧಗಂಗಾ ಮೆಡಿಕಲ್‌ ಕಾಲೇಜು ಸದಾ ಹೊಸತನಗಳಿಗೆ ತೆರದುಕೊಳ್ಳುತ್ತಾ ಬಂದಿದ್ದು, ಮಹಾನಗರಗಳಲ್ಲಿ ಸಿಗುವ ವೈದ್ಯಕೀಯ ಸೌಲಭ್ಯಗಳನ್ನು ಕ್ರಿಯಾತ್ಮಕವಾಗಿ ಅಳವಡಿಸಿ ಕೊಂಡು ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತಿದೆ. ನಮ್ಮ ವೈದ್ಯರಲ್ಲಿ ಉಪನ್ಯಾಸಕರಲ್ಲಿ ಹೊಸ ಸಾಧ್ಯತೆಗಳನ್ನು ತುಂಬುವ ದೃಷ್ಟಿಯಿಂದ ಆಯೋ ಜಿಸಿರುವ ಸಮ್ಮೇಳನಕ್ಕೆ ದೇಶಾದ್ಯಂತ ಸಿಕ್ಕಿರುವ ಪ್ರತಿಕ್ರಿಯೆ ಸಂತಸ ತಂದಿದೆ ಎಂದರು.

ಫಾರ್ಮಕಾಲಜಿ ವಿಭಾಗದ ಸುಮಾರು 200 ಕ್ಕೂ ಹೆಚ್ಚು ವೈದ್ಯರು ರಾಜ್ಯದ ಬೇರೆ ಬೇರೆ ಭಾಗಗಳಿಂದ ಆಗಮಿಸಿದ್ದರು. ಆನ್‌ಲೈನ್ ಮೂಲಕ ಸೌಧಿ,ಸೌತ್ ಆಫ್ರಿಕಾ ಸೇರಿದಂತೆ ಅನೇಕ ದೇಶಗಳಿಂದ ನೂರಾರು ವೈದ್ಯರು ಭಾಗವಹಿಸಿದ್ದರು.

ನೂತನ ತಂತ್ರಜ್ಞಾನ,ವಿಷಯ ಹಾಗೂ ರೋಗಗಳ ಕುರಿತಂತೆ ವೈದ್ಯರು ಪ್ರಾತ್ಯಕ್ಷಿತೆಯನ್ನು ನೀಡಿದರು. ಹಿರಿಯ ಫಾರ್ಮಕಾಲಜಿಸ್ಟ್ ಗಳಿಗೆ ಇದೇ ವೇಳೆ‌ ಅಭಿನಂದಿಸಲಾಯಿತು‌.

ಸಿದ್ಧಗಂಗಾ ಮೆಡಿಕಲ್‌ ಕಾಲೇಜಿನ ಕಾರ್ಯಕಾರಿ ನಿರ್ದೇಶಕ ಡಾ.ಸಚ್ಚಿದಾನಂದ್‌, ಪ್ರಾಚಾರ್ಯರಾದ ಡಾ.ಶಾಲಿನಿ, ಫಾರ್ಮಕಾಲಜಿ ವಿಭಾಗದ ಮುಖ್ಯಸ್ಥೆ ಡಾ.ಪ್ರಿಯದರ್ಶಿನಿ, ಕೆಎಸ್ ಎಂಪಿ ಅಧ್ಯಕ್ಷ ಡಾ.ಮಂಜುನಾಥ್ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಉಪನ್ಯಾಸಕರು, ಸಿಬ್ಬಂದಿ ಉಪಸ್ಥಿತ ರಿದ್ದರು.