Tuesday, 10th December 2024

ಮುಖ್ಯಮಂತ್ರಿ ಸಿದ್ದರಾಮಯ್ಯ ನುರಿತ ರಾಜಕಾರಣಿ: ಸಚಿವ ಸೋಮಣ್ಣ 

ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುರಿತ ರಾಜಕಾರಣಿ. ಇಂತಹ ಸಂದರ್ಭದಲ್ಲಿ ಅವರ ಪಕ್ಷ ದೃಢ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ರಾಜೀನಾಮೆ ಬಗ್ಗೆ ನಾವು ತೀರ್ಮಾನ ಮಾಡಲು ಆಗುವುದಿಲ್ಲ. ಅವರ ಪಕ್ಷ ತೀರ್ಮಾನ ಮಾಡಬೇಕು ಎಂದು ಕೇಂದ್ರ ಸಚಿವ ಸೋಮಣ್ಣ ಸ್ಪಷ್ಟ ಪಡಿಸಿದರು.
ಮಾಧ್ಯಮದೊಂದಿಗೆ ಮಾತನಾಡಿ, ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಕಾನೂನು ಅಡಿಯಲ್ಲಿ ತಮ್ಮ ಕೆಲಸ ಮಾಡಿದ್ದಾರೆ. ಹಾಗೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಹ ಕಾನೂನು ಚೌಕಟ್ಟಿನಲ್ಲಿ ನಡೆದುಕೊಳ್ಳಬೇಕಿದೆ ಎಂದರು.
ಕಾನೂನು ಚೌಕಟ್ಟಿನಲ್ಲಿ ನಡೆದುಕೊಳ್ಳಬೇಕಿರುವುದು ಅನುಭವಿ ರಾಜಕಾರಣಿಯ ಕರ್ತವ್ಯ. ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಬೇಕು ಎನ್ನುವುದು ನನ್ನ ಆಗ್ರಹ. ಕಾನೂನು ಚೌಕಟ್ಟಿನಲ್ಲಿ ನಡೆದುಕೊಂಡರೆ ಅವರ ವರ್ಚಸ್ಸು ಹೆಚ್ಚಾಗುತ್ತದೆ ಎಂದು ತಿಳಿಸಿದರು.
ರಾಜ್ಯಪಾಲರಿಗೆ ಈ ಪ್ರಕರಣದಲ್ಲಿ ತಪ್ಪು ಎನಿಸಿದ್ದರಿಂದ ಅವರು ಪ್ರಾಸಿಕ್ಯೂಷನ್ ನಿರ್ಧಾರ ಮಾಡಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕೆಂಬ ಉದ್ದೇಶದಿಂದಲ್ಲ ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಅವರು ದುಡುಕೋದು, ಮತ್ತೊಂದು ಮಾಡುತ್ತಾರೆ ಎಂಬುದು ಗೊತ್ತಿಲ್ಲ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ  ನಾವು ಬಿಜೆಪಿಯವರು ಹೇಗೆ ನಡೆದುಕೊಂಡಿದ್ದೀವಿ ಎಂಬುದನ್ನು ಅರ್ಥ ಮಾಡಿಕೊಂಡು ತೀರ್ಮಾನ ಕೈಗೊಂಡರೆ ಮುಂದಿನ ಪೀಳಿಗೆಗೆ ರಾಜಕೀಯದ ಬಗ್ಗೆ ಗೌರವ ಬರುತ್ತದೆ ಎಂದರು.