Sunday, 15th December 2024

ಸಿದ್ದಿವಿನಾಯಕ ವಿಸರ್ಜನಾ ಮಹೋತ್ಸವ

ತುಮಕೂರು: ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಿದ್ದ 46ನೇ ವರ್ಷದ ಗಣೇಶಮೂರ್ತಿಯನ್ನು ಗುರುವಾರ ತುಮಕೂರು ಅಮಾನಿಕೆರೆಯಲ್ಲಿ ಅದ್ದೂರಿ ತೆಪ್ಪೋತ್ಸವದೊಂದಿಗೆ ವಿಸರ್ಜಿಸಲಾಯಿತು.
ನಗರದ ಸಿದ್ದಿವಿನಾಯಕ ಸಮುದಾಯ ಭವನದಲ್ಲಿ 46ನೇ ಗಣೇಶೋತ್ಸವದ ಅಂಗ ವಾಗದಿ 35 ದಿನಗಳ ಕಾಲ ಪ್ರತಿಷ್ಠಾಪಿಸಿದ್ದ ಗಣೇಶಮೂರ್ತಿ ವಿಸರ್ಜನಾ ಮಹೋತ್ಸವಕ್ಕೆ ವಿಜಯದಶಮಿಯಂದು ಸಂಜೆ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ವಿದ್ಯುಕ್ತ ಚಾಲನೆ ನೀಡಿದರು.
ಅಲಂಕೃತ ವಾಹನದಲ್ಲಿ ಕೂರಿಸಿದ್ದ ಗಣೇಶಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಶ್ರೀಗಳು ವೈಭವದ ಗಣೇಶೋತ್ಸವದ ಮೆರವಣಿಗೆಗೆಯನ್ನು ಉದ್ಘಾಟಿಸಿದರು.
ಮೆರವಣಿಗೆಯು ಸಾಗಿದ ರಸ್ತೆಯುದ್ದಕ್ಕೂ ನಾಸಿಕ್ ಡೋಲುಸ ಮಂಗಳವಾದ್ಯ, ಕೋಲಾಟ, ಸೋಮನ ಕುಣಿತ, ವೀರಗಾಸೆ, ಪೂಜಾ ಕುಣಿತ, ಪಟದ ಕುಣಿತ, ಡಂಕವಾದ್ಯ, ಚಂಡೆ ವಾದ್ಯ, ಚಿಟ್ಟಿ ಮೇಳದಂತಹ ಜನಪದ ಕಲೆಗಳ ಪ್ರದರ್ಶನ ಸೇರಿದಂತೆ ವಿವಿಧ ಜಾನಪದ ಕಲಾ ತಂಡದ ಆಕರ್ಷಕ ಪ್ರದರ್ಶನ ನೋಡುಗರ ಗಮನ ಸೆಳೆದವು.
ಗಣೇಶೋತ್ಸವದ ಮೆರವಣಿಗೆಯು ಜೂನಿಯರ್ ಕಾಲೇಜಿನಿಂದ ಹೊರಟು ಬಿ.ಹೆಚ್. ರಸ್ತೆ, ಎಂ.ಜಿ. ರಸ್ತೆ, ಹೊರಪೇಟೆ, ಮಂಡಿಪೇಟೆ, ಆಯಿಲ್ ಮಿಲ್ ರಸ್ತೆ ಮೂಲಕ ಸಾಗಿತು. ಮೆರವಣಿಗೆಯು ಮುಂಜಾನೆ 5.30ರಲ್ಲಿ ಕೋಟೆ ಆಂಜನೇಯಸ್ವಾಮಿ ದೇವಾಲಯದ ಬಳಿ ಬಂದಾಗ ಭಕ್ತಾದಿಗಳ ಆಕರ್ಷಕ ಸಿಡಿ ಮದ್ದುಗಳ ಪ್ರದರ್ಶನ ನಡೆಯಿತು. ಆಕಾಶದೆತ್ತರದಲ್ಲಿ ಸಿಡ್ಡಿ ಮದ್ದುಗಳ ಚಿತ್ತಾಕರ್ಷಕ ಪ್ರದರ್ಶನ ಭಕ್ತಾದಿಗಳನ್ನು ಆಕರ್ಷಿಸಿತು.
ನಂತರ ಕೋಟೆ ಆಂಜನೇಯಸ್ವಾಮಿ ವೃತ್ತದಿಂದ ಗಣೇಶೋತ್ಸವ ಮೆರವಣಿಗೆಯು ಬೆಳಿಗ್ಗೆ 7.30ಕ್ಕೆ ಅಮಾನಿಕೆರೆಗೆ ತೆರಳಿತು.
ಅಮಾನಿಕೆರೆಯಲ್ಲಿ ವೈಭವದ ತೆಪ್ಪೋತ್ಸವ ನಡೆದು ಗಣೇಶಮೂರ್ತಿಯನ್ನು ಬೆಳಗ್ಗೆ 8 ಗಂಟೆಗೆ ಅದ್ದೂರಿಯಿಂದ ವಿಸರ್ಜಿಸ ಲಾಯಿತು.
ಅಮಾನಿಕೆರೆಯಲ್ಲಿ ಗಣೇಶಮೂರ್ತಿ ವಿಸರ್ಜನೆ ಅಂಗವಾಗಿ ನಡೆದ ತಪ್ಪೋತ್ಸವದ ನಡೆಯುವ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಹಲಿಂಗಪ್ಪ ಲಂಗೋಟಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಕುಮಾರಸ್ವಾಮಿ, ಪ್ರದೀಪ್, ಮಂಜುನಾಥ್, ಅಣ್ಣಪ್ಪ ಬೋಟ್‌ನಲ್ಲಿ ರಕ್ಷಣಾತ್ಮಕವಾಗಿ ಸುತ್ತುವರೆಯುವ ಮೂಲಕ ಯಾವುದೇ ಅನಾಹುತಗಳಾಗದಂತೆ ಕ್ರಮ ವಹಿಸಿದರು.
ನಿನ್ನೆ ಸಂಜೆಯಿ0ದ ಇಡೀ ರಾತ್ರಿ ನಡೆದ ಗಣೇಶೋತ್ಸವದಲ್ಲಿ ಸಿದ್ದಿವಿನಾಯಕ ಸೇವಾ ಮಂಡಳಿಯ ಉಪಾಧ್ಯಕ್ಷ ಹೆಚ್.ಆರ್. ನಾಗೇಶ್, ಕಾರ್ಯದರ್ಶಿ ರಾಘವೇಂದ್ರರಾವ್, ಸಹಕಾರ್ಯದರ್ಶಿ ಜಗಜ್ಯೋತಿ ಸಿದ್ದರಾಮಣ್ಣ, ಖಜಾಂಚಿ ಪ್ರಭು, ಸಾಂಸ್ಕೃತಿಕ ಸಮಿತಿಯ ಟಿ.ಹೆಚ್. ಪ್ರಸನ್ನಕುಮಾರ್, ನಿರ್ದೇಶಕರುಗಳಾದ ವೆಂಕಟೇಶ್ ಬಾಬು, ಉತ್ಸವ ಸಮಿತಿ ಅಧ್ಯಕ್ಷ ಕೋರಿ ಮಂಜಣ್ಣ, ಟಿ.ಬಿ. ಶೇಖರ್, ಎನ್. ವೆಂಕಟೇಶ್, ದಸರಾ ಸಮಿತಿಯ ಚಿದಾನಂದ್, ಬಾವಿಕಟ್ಟೆ ಮಂಜುನಾಥ್, ಮಹೇಶ್, ಬಸವರಾಜು, ಗೋವಿಂದರಾಜು, ಟೂಡಾ ಅಧ್ಯಕ್ಷ ಚಂದ್ರಶೇಖರ್ ಸೇರಿದಂತೆ ನೂರಾರು ಮಂದಿ ಭಕ್ತಾದಿಗಳು ಪಾಲ್ಗೊಂಡಿದ್ದರು.
ಗಣೇಶೋತ್ಸವದ ಅಂಗವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹಲ್‌ಕುಮಾರ್ ಮಾರ್ಗದರ್ಶನದಲ್ಲಿ ನಗರ ಡಿವೈಎಸ್ಪಿ ಶ್ರೀನಿವಾಸ್ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.