Saturday, 26th October 2024

ರೇಷ್ಮೆ ಕೃಷಿಯಲ್ಲಿ ತೊಡಗಿ ಉತ್ತಮ ಆದಾಯ ಗಳಿಸಿ : ಉಪನಿರ್ದೇಶಕ ಡಿ.ಎಂ.ಆ0ಜನೇಯಗೌಡ

ಚಿಕ್ಕಬಳ್ಳಾಪುರ: ಕೊರೊನಾ ನಂತರದ ದಿನಗಳಲ್ಲಿ ಸ್ಥಳೀಯ ರೇಷ್ಮೆಗೆ ಬೇಡಿಕೆ ಹೆಚ್ಚಾಗಿರುವ ಪರಿಣಾಮ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡಿಗೆ ಉತ್ತಮ ಬೆಲೆ ಬಂದಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯ ರೈತರು ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ರೇಷ್ಮೆ ಇಲಾಖೆಯ ಉಪನಿರ್ದೇಶಕ ಡಿ.ಎಂ.ಆ0ಜನೇಯಗೌಡ ತಿಳಿಸಿದರು.

ನಗರದ ಹೊರವಲಯದ ರೇಷ್ಮೆ ಇಲಾಖೆ ಕಚೇರಿಯಲ್ಲಿ ಚನ್ನಪಟ್ಟಣ ರೇಷ್ಮೆ ತರಬೇತಿ ಸಂಸ್ಥೆ ವತಿಯಿಂದ ಕ್ಷೇತ್ರ ಮಟ್ಟದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ ರೇಷ್ಮೆ ಬೆಳೆಗಾರರಿಗೆ ಆಯೋಜಿಸಿದ್ದ ಒಂದು ದಿನದ ಪ್ರಾತ್ಯಕ್ಷಿತೆ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾ ಡಿದರು.

ಗ್ರಾಮೀಣ ಭಾಗದ ರೈತರಿಗೆ ರೇಷ್ಮೆ ಲಾಭದಾಯಕ ಬೆಳೆಯಾಗಿದ್ದು, ರೈತರು ರೇಷ್ಮೆ ಕೃಷಿ ಯಲ್ಲಿ ವಿಜ್ಞಾನಿಗಳ ಸಲಹೆ ಸೂಚನೆಗಳ ಮಾಹಿತಿಯನ್ನು ಪಡೆದು ಹಿಪ್ಪುನೇರಳೆ ತೋಟ, ರೇಷ್ಮೆ ಹುಳ ಸಾಕಾಣಿಕೆ ಹಾಗೂ ಗೂಡು ಉತ್ಪಾದನೆಗೆ ಆದ್ಯತೆ ನೀಡಬೇಕು. ಪ್ರಸ್ತುತ ರೇಷ್ಮೆ ಗೂಡಿಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಧಾರಣೆ ಇರುವುದರಿಂದ ಹೆಚ್ಚಿನ ಆದಾಯ ಗಳಿಸಬಹುದೆಂದು ಹೇಳಿದರು.

ಈ ಮೊದಲು ಚನ್ನಪಟ್ಟಣ ಸರ್ಕಾರಿ ರೇಷ್ಮೆ ತರಬೇತಿ ಸಂಸ್ಥೆಯಲ್ಲಿ ರೇಷ್ಮೆ ಕುರಿತು ಬೆಳೆಗಾರರಿಗೆ ತರಬೇತಿ ನೀಡಲಾಗುತ್ತಿತ್ತು. ಆದರೆ  ರೈತರ ಹಿತದೃಷ್ಟಿಯಿಂದ ಈಗ ಸಂಸ್ಥೆಯು ಚಿಕ್ಕಬಳ್ಳಾಪುರದ ರೇಷ್ಮೆ ಇಲಾಖೆ ಕಚೇರಿಯಲ್ಲಿ ಕ್ಷೇತ್ರ ಮಟ್ಟದಲ್ಲಿ ಬೆಳೆಗಾರ ರಿಗೆ ರೇಷ್ಮೆ ಕುರಿತು ತರಬೇತಿ ನೀಡುತ್ತಿದ್ದು, ಎಲ್ಲ ಬೆಳೆಗಾರರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ರೇಷ್ಮೆ ಇಲಾಖೆಯಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಪಡೆದು ದ್ವಿತಳಿ ಗೂಡನ್ನು ಉತ್ಪಾದನೆ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಮುಂದಾಗಬೇಕು ಎಂದರು.

ಚನ್ನಪಟ್ಟಣ ಸರ್ಕಾರಿ ರೇಷ್ಮೆ ತರಬೇತಿ ಸಂಸ್ಥೆಯ ರೇಷ್ಮೆ ಸಹಾಯಕ ನಿರ್ದೇಶಕ ಜಿ.ಪಶುಪತಿಗಿರಿ ಮಾತನಾಡಿ, ಹಿಪ್ಪುನೇರಳೆ ತೋಟಗಳ ನಿರ್ವಹಣೆ, ಚಳಿಗಾಲದಲ್ಲಿ ಕಾಡುವ ರೋಗಬಾಧೆಯನ್ನು ನಿಯಂತ್ರಿಸುವ ಕ್ರಮ ಹಾಗೂ ಜೈವಿಕ ರಸಗೊಬ್ಬರ ಬಳಕೆ ಕುರಿತು ರೇಷ್ಮೆ ಬೆಳೆಗಾರರಿಗೆ ಮಾಹಿತಿ ನೀಡಿದರು.

ಚಿಕ್ಕಬಳ್ಳಾಪುರ ವಿಭಾಗದ ರೇಷ್ಮೆ ಸಹಾಯಕ ನಿರ್ದೇಶಕ ಅಕ್ಮಲ್ ಪಾಷಾ ಮಾತನಾಡಿ, ಸರ್ಕಾರಿ ರೇಷ್ಮೆ ಮಾರುಕಟ್ಟೆಗಳಲ್ಲಿ ಪಾರದರ್ಶವಾಗಿ ರೇಷ್ಮೆ ಗೂಡಿನ ಹರಾಜು ಪ್ರಕ್ರಿಯೆ ನಡೆಯುತ್ತದೆ. ಹೀಗಾಗಿ ಪ್ರತಿಯೊಬ್ಬ ರೈತರು ತಾವು ಬೆಳೆದ ರೇಷ್ಮೆ ಗೂಡನ್ನು ಸರ್ಕಾರಿ ರೇಷ್ಮೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕು. ಇಲ್ಲಿ ಮಾರಾಟ ಮಾಡುವುದರಿಂದ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ರೈತರು ಪಡೆಯಬಹುದಾಗಿದೆ ಎಂದು ವಿವರಿಸಿದರು.

ತರಬೇತಿಯಲ್ಲಿ ಚನ್ನಪಟ್ಟಣ ಸರ್ಕಾರಿ ರೇಷ್ಮೆ ತರಬೇತಿ ಸಂಸ್ಥೆಯ ರೇಷ್ಮೆ ಸಹಾಯಕ ನಿರ್ದೇಶಕಿ ಎಸ್.ಇಂದ್ರಾಣಿ, ರೇಷ್ಮೆ ಬೆಳೆಗಾರರಾದ ರಾಮಾಂಜಿನಪ್ಪ, ನೆಲಮಾಕಲಹಳ್ಳಿ ಕೆ.ಎಂ.ದೇವರಾಜ್, ಕಡಶೀಗೇನಹಳ್ಳಿ, ನಂದಿ ಯಲುವಹಳ್ಳಿ ಸೇರಿದಂತೆ ಹಲವು ಗ್ರಾಮದ ರೈತ ಮುಖಂಡರು ಹಾಜರಿದ್ದರು.