ತುಮಕೂರು: ತುಮಕೂರು ನಗರವನ್ನು ಪ್ರಮುಖ ಸ್ಮಾರ್ಟ್ ನಗರವನ್ನಾಗಿ ಸಮಗ್ರವಾಗಿ ಅಭಿವೃದ್ಧಿಗೊಳಿಸುವುದು ಸ್ಮಾರ್ಟ್ ಸಿಟಿ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀನಿವಾಸ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸ್ಮಾರ್ಟ್ ಸಿಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, 178 ಯೋಜನೆಗಳ ಪೈಕಿ 170 ಯೋಜನೆಗಳು ಈಗಾಗಲೇ ಪೂರ್ಣಗೊಂಡಿದ್ದು, 6 ಯೋಜನೆಗಳು ಪ್ರಗತಿಯಲ್ಲಿವೆ. ಪೂರ್ಣಗೊಂಡ ಕಟ್ಟಡಗಳ ನಿರ್ವಹಣೆಗೆ ಸಂಬಂಧಿಸಿದಂತೆ ಪಾಲಿಕೆ ಆಯುಕ್ತರೊಂದಿಗೆ ಚರ್ಚಿಸಿ ಸೂಕ್ತ ವರದಿಯನ್ನು ತಮಗೆ ಸಲ್ಲಿಸುವಂತೆ ಸ್ಮಾರ್ಟ್ ಸಿಟಿ ಎಂಡಿ ರಂಗಸ್ವಾಮಿಗೆ ಸೂಚಿಸಿದರು.
ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ನಿರ್ಮಿಸಲಾಗಿರುವ ಉದ್ಯಾನವನ ಗಳ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳು ವಂತೆ ಸೂಚಿಸಿದ ಅವರು, ಸ್ಮಾರ್ಟ್ ರಸ್ತೆಗಳಲ್ಲಿ ಅಳವಡಿಸಿರುವ ಡಕ್ಟಿಂಗ್ ವ್ಯವಸ್ಥೆಯನ್ನು ಉಪಯೋಗಿಸಿಕೊಳ್ಳಲು ಸೂಕ್ತ ದರಗಳನ್ನು ನಿಗಧಿಗೊಳಿಸಿ ತಮಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು. ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ನಿರ್ಮಿಸಿರುವ ಕರ್ನ್ಸವೆಂನ್ಸಿ ಪಾರ್ಕಿಂಗ್ ಜಾಗವನ್ನು ಬಳಸಿಕೊಳ್ಳುವ ಸಂಬಂಧ ತುಮಕೂರು ಮಹಾನಗರಪಾಲಿಕೆ ವತಿಯಿಂದ ಶುಲ್ಕವನ್ನು ನಿಗಧಿಪಡಿಸಿ ಗುತ್ತಿಗೆ ನೀಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸಭೆಯಲ್ಲಿ ಸಂಸದ ಜಿ.ಎಸ್.ಬಸವರಾಜು, ಶಾಸಕ ಜಿ.ಬಿ.ಜ್ಯೋತಿಗಣೇಶ್, ಸಿಇಒ ಡಾ: ಕೆ. ವಿದ್ಯಾಕುಮಾರಿ, ಎಸ್ಪಿ ರಾಹುಲ್ ಕುಮಾರ್ ಶಹಪೂರ್ ವಾಡ್, ಪಾಲಿಕೆ ಆಯುಕ್ತ ದರ್ಶನ್, ಸ್ಮಾರ್ಟ್ ಸಿಟಿ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.