ತುಮಕೂರು: ಅಂತರರಾಷ್ಟ್ರೀಯ ಕ್ರಿಕೆಟ್ ಕನಸು ಕಾಣುವ ಯುವಜನರಿಗೆ ಸೂಕ್ತ ವೇದಿಕೆ ಒದಗಿಸುವ ಉದ್ದೇಶದಿಂದ ಕರ್ನಾಟಕ ಸ್ಟೇಟ್ ಸಾಫ್ಟ್ಬಾಲ್ ಕ್ರಿಕೆಟ್ ಆಸೋಸಿಯೇಷನ್‌ನಿಂದ ಐಪಿಎಲ್ ಮಾದರಿಯಲ್ಲಿ ನ. 1ರಿಂದ ಡಿ. 1ರವರೆಗೆ ಒಂದು ತಿಂಗಳ ಕಾಲ ಕರ್ನಾಟಕ ಸಾಫ್ಟ್ ಬಾಲ್ ಪ್ರಿಮಿಯರ್ ಲೀಗ್ (ಕೆಎಸ್‌ಪಿಎಲ್) ಅಯೋಜಿಸಲಾಗಿದೆ ಎಂದು ಕೆ.ಎಸ್.ಎಸ್,ಸಿ.ಎ ಸಂಸ್ಥಾಪಕ ರಾಜ್ಯಾಧ್ಯಕ್ಷ ಗಂಗಾಧರರಾಜು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ನ. 01 ರಿಂದ ಡಿ. 01ರ ವರೆಗೆ ಐಪಿಎಲ್ ಮಾದರಿಯಲ್ಲಿ ಕೆಎಸ್‌ಪಿಎಲ್(ಕರ್ನಾಟಕ ಸಾಫ್ಟ್ ಬಾಲ್‌ಪ್ರಿಮಿಯರ್ ಲೀಗ್) ಟೂರ್ನಿಯನ್ನು ಬೆಂಗಳೂರಿನ ಸೂಲದೇವನ ಹಳ್ಳಿಯಲ್ಲಿರುವ ಆಚಾರ್ಯ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ. ರಾಜ್ಯದ 31 ಜಿಲ್ಲೆಗಳ 32 ತಂಡಗಳು ಭಾಗವಹಿಸುತ್ತಿದ್ದು, ಮೊದಲ ಬಹುಮಾನ ಪಡೆದ ತಂಡಕ್ಕೆ 50 ಲಕ್ಷ ನಗದು, ಎರಡನೇ ಬಹುಮಾನ ಪಡೆದ ತಂಡಕ್ಕೆ 25 ಲಕ್ಷ ನಗದು ಬಹುಮಾನ ನೀಡಲಾಗುತ್ತಿದೆ ಎಂದರು.
ರಾಜ್ಯ ಮಟ್ಟದಲ್ಲಿ ಹೆಸರು ಮಾಡಿರುವ ಕ್ರಿಕೆಟ್ ಆಟಗಾರರನ್ನು ಐಪಿಎಲ್ ಬಿಡ್ ರೀತಿಯ ಹರಾಜಿನ ಮೂಲಕ ಸೇರಿಸಿ ಜಿಲ್ಲಾ ತಂಡಗಳನ್ನು ರಚಿಸಲಾಗಿದೆ.ತುಮಕೂರು ಟೈಟಾನ್ ತಂಡದಲ್ಲಿ ಸ್ಥಳೀಯ 12 ಆಟಗಾರರ ಜತೆ, ರಾಜ್ಯಮಟ್ಟದ ನಾಲ್ವರು ಆಟಗಾರರಿದ್ದು,ರಘು ಅವರು ತುಮಕೂರು ತಂಡದ ಮಾಲೀಕರಾಗಿದ್ದಾರೆ ಎಂದು ತಿಳಿಸಿದರು.
ತುಮಕೂರು ಟೈಟಾನ್ ತಂಡದ ಮಾಲೀಕ ರಘು ಮಾತನಾಡಿ,ಇದುವರೆಗೂ ಸಾಫ್ಟ್ ಬಾಲ್ ಕ್ರಿಕೆಟ್ ಆಟವಾಡುತ್ತಿದ್ದ ಎಲ್ಲಾ ಆಟಗಾರರನ್ನು ಒಗ್ಗೂಡಿಸಿ,ತುಮಕೂರು ಟೈಟಾನ್ ತಂಡ ರಚಿಸಲಾಗಿದೆ.ನಮ್ಮ ತಂಡ ಉತ್ತಮ ಪ್ರದರ್ಶನ ನೀಡಲಿದೆ ಎಂಬ ವಿಶ್ವಾಸವಿದೆ.ಎಲ್ಲಾ ಅನುಭವಿ ಮತ್ತು ನುರಿತ ಆಟಗಾರರಿದ್ದು,ಹಲವು ವರ್ಷಗಳಿಂದ ಸಾಫ್ಟ ಬಾಲ್ ಕ್ರಿಕೆಟ್ ಆಡಿದವರು ತುಮಕೂರು ತಂಡವನ್ನು ಪ್ರತಿನಿಧಿಸುತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ತುಮಕೂರು ಟೈಟಾನ್ ತಂಡದ ಆಟಗಾರರಾದ ನಿತೀನ್, ಪವನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.