Sunday, 15th December 2024

ಟಿಕೆಟ್ ನನಗೆ ಸಿಗುವುದು, ಯಾವುದೇ ಅನುಮಾನ ಬೇಡ: ಸೊಗಡು ವಿಶ್ವಾಸ

ತುಮಕೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತುಮಕೂರು ನಗರ ಕ್ಷೇತ್ರದಿಂದ ಈ ಸಲ ಬಿಜೆಪಿ ಟಿಕೆಟ್ ನನಗೆ ಸಿಗುವುದು ಶೇ.೧೦೦ ರಷ್ಟು ಖಚಿತ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷರು ನನಗೆ ಟಿಕೆಟ್ ನೀಡುವ ಭರವಸೆ ಕೊಟ್ಟಿದ್ದು, ಅದರಂತೆ ಜೋಳಿಗೆ ಹಿಡಿದು ಮತ ಭಿಕ್ಷೆ ಮಾಡುತ್ತಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಹಿಂದೂ, ಕ್ರೈಸ್ತ, ಮುಸಲ್ಮಾನ ಧರ್ಮ ಗುರುಗಳು ನನಗೆ ಆಶೀರ್ವಾದ ನೀಡಿದ್ದು, ನಗರದ ಎನ್.ಆರ್.ಕಾಲೋನಿಯ ದುರ್ಗಮ್ಮ, ದಾಳಮ್ಮ, ಪೂಜಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಅಲ್ಲಿನ ಕಾರ್ಯಕರ್ತರು, ಹಿತೈಷಿ ಗಳು, ಸಾರ್ವಜನಿಕರ ಸಹಕಾರದೊಂದಿಗೆ ಅವರು ನೀಡಿದ ಹಣವನ್ನು ನಾಮಪತ್ರ ಸಲ್ಲಿಸಲು ಠೇವಣಿ ಹಾಗೂ ಚುನಾವಣಾ ವೆಚ್ಚಕ್ಕಾಗಿ ಉಪಯೋಗಿಸುವುದಾಗಿ ತಿಳಿಸಿದರು.
ಜಿಲ್ಲೆಯ ಎಲ್ಲ ತಾಲೂಕುಗಳು ಮತ್ತು ದೊಡ್ಡ ಊರುಗಳು ನನಗೆ ಪರಿಚಯವಾಗಿದ್ದು, ಎಲ್ಲ ಕಡೆ ಅಭಿಮಾನಿಗಳು, ಹಿತೈಷಿಗಳು, ಬೆಂಬಲಿಗರು, ಕಾರ್ಯಕರ್ತರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಪಕ್ಷಾತೀತ, ಜಾತ್ಯಾತೀತವಾಗಿ ಎಲ್ಲರೂ ನನಗೆ ಬೆಂಬಲ ಸೂಚಿಸುತ್ತಿದ್ದಾರೆ.
ಕೆಲವು ಪಕ್ಷಗಳ ಅಭ್ಯರ್ಥಿಗಳು ಇಲ್ಲಸಲ್ಲದ ಆಸೆ, ಆಮಿಷ ಒಡ್ಡಿ ಆಣೆ ಪ್ರಮಾಣದ ಮೂಲಕ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಶಾಸಕನಾಗಿ, ಸಚಿವನಾಗಿ ಗೆದ್ದಾಗ ಮತ್ತು ಸೋತಾಗ ಸದಾ ಜನಸೇವೆಯಲ್ಲಿ ತೊಡಗಿದ್ದು, ಕೊರೊನಾ ಸಂಕಷ್ಟದಲ್ಲಿ ಜನರಿಗೆ ಅಗತ್ಯ ಸೇವೆಗಳನ್ನು ನೀಡಿ, ಆಸ್ಪತ್ರೆ ವ್ಯವಸ್ಥೆ, ಸತ್ತವರ ಅಂತ್ಯಕ್ರಿಯೆ, ಚಿತಾಭಸ್ಮವನ್ನು ಶ್ರೀರಂಗ ಪಟ್ಟಣದ ತ್ರಿವೇಣಿ ಸಂಗಮದಲ್ಲಿ ವಿಸರ್ಜಿಸಿ ಮೋಕ್ಷ ದೊರಕಿಸಿಕೊಟ್ಟಿದ್ದನ್ನು ಸಾರ್ವಜನಿಕರು ಮರೆತಿಲ್ಲ ಎಂದರು.
ಜಿಲ್ಲೆಯ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತ ನೀರು, ರಸ್ತೆ, ಆರೋಗ್ಯ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಟ್ಟಿರುವುದರಿಂದ ಜನ ಈ ಸಲ ಚುನಾವಣೆಯಲ್ಲಿ ನನ್ನನ್ನು ಕೈಬಿಡುವುದಿಲ್ಲ. ಬಿ.ಎಸ್.ಯಡಿಯೂರಪ್ಪ ನಮ್ಮ ಪಕ್ಷದ ಸರ್ವೋಚ್ಛ ನಾಯಕ ಅವರ ಮುಂದಾಳತ್ವದಲ್ಲೆ ಚುನಾವಣೆ ಎದುರಿಸುತ್ತೇವೆ. ಬಿಎಸ್‌ವೈ ಅವರನ್ನು ಕಡೆಗಣಿಸಿದರೆ ಪಕ್ಷಕ್ಕೆ ಹಾನಿಯಾಗುವುದು ಸಹಜ ಎಂದು ಅಭಿಪ್ರಾಯಪಟ್ಟರು.
ಜಿಲ್ಲೆಯ ಅಭಿಮಾನಿಗಳು, ಹಿತೈಷಿಗಳಿಗೆ, ಕಾರ್ಯಕರ್ತರಿಗೆ ಯಾವುದೆ ರೀತಿಯ ಗೊಂದಲ ಬೇಡ. ಈ ಸಲ ನಗರ ಕ್ಷೇತ್ರಕ್ಕೆ ನಾನೆ ಬಿಜೆಪಿ ಅಭ್ಯರ್ಥಿ. ಈ ಸಲ ಜನರು ಕೊಟ್ಟಿರುವ ಬಿ ಫಾರಂ ನನ್ನ ಜೋಳಿಗೆಯಲ್ಲಿದೆ ಎಂದು ಮಾರ್ಮಿಕವಾಗಿ ನುಡಿದರು. ಈ ಸಲ ಚುನಾವಣೆಗೆ ನಿಲ್ಲುವುದು ಖಚಿತವಾಗಿದೆ. ಪ್ರಚಾರ ಆರಂಭಿಸಿದ್ದೇನೆ. ಈ ಸಂದರ್ಭದಲ್ಲಿ ಯಾವುದೆ ರೀತಿಯ ಸಂಧಾನಕ್ಕೆ ಹೋಗುವುದಿಲ್ಲ. ಹಾಗೊಂದು ವೇಳೆ ಇದಕ್ಕೆ ಒಪ್ಪಿದರೆ ನನ್ನ ಹಿತೈಷಿಗಳು, ಅಭಿಮಾನಿಗಳು, ಕಾರ್ಯಕರ್ತರಿಗೆ ವಿಷ ಹಾಕಿದ್ದಂತೆ. ದೇವರೆ ಬಂದರೂ ನನ್ನ ಮನಸ್ಸು ಬದಲಾಯಿಸುವುದಿಲ್ಲ. ಮತದಾರ ದೇವರ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದರು.
ಮುಖಂಡರಾದ ಜಯಸಿಂಹರಾವ್, ಧನಿಯಾಕುಮಾರ್, ಶಾಂತರಾಜು, ಹರೀಶ್, ಮಹೇಶ್, ನಂಜುಂಡಪ್ಪ, ನರಸಿಂಹಯ್ಯ ಮತ್ತಿತರರಿದ್ದರು.