Monday, 14th October 2024

ನನ್ನ ಮಣ್ಣು ನನ್ನ ದೇಶ ಅಭಿಯಾನ: ಮಣ್ಣು ಸಂಗ್ರಹ

ತುಮಕೂರು: ಸ್ವಾತಂತ್ರ‍್ಯ ಅಮೃತ ಮಹೋತ್ಸವ ಆಚರಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ “ನನ್ನ ಮಣ್ಣು ನನ್ನ ದೇಶ” ಅಭಿಯಾನ ದಡಿ ಮಣ್ಣನ್ನು ಸಂಗ್ರಹಿಸಿ, ಗ್ರಾಮ ಪಂಚಾಯತಿಗಳಿಂದ ಬಂದ ಮಣ್ಣನ್ನು ತಾಲೂಕು ಮಟ್ಟದಲ್ಲಿ ಸಂಗ್ರಹಿಸಿ, ನಂತರ ಸರ್ವಲಾಂಕೃತ ಕಲಶದ ಮೂಲಕ ಆಗಸ್ಟ್ ೨೦ರೊಳಗೆ ಜಿಲ್ಲೆಗೆ ಕಳಿಸುವ ವ್ಯವಸ್ಥೆಯನ್ನು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿಗಳು ಮಾಡಬೇಕೆಂದು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಜಿ. ಪ್ರಭು ಹೇಳಿದರು.
ಜಿಲ್ಲಾ ಪಂಚಾಯತ್ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ದೇಶಕ್ಕಾಗಿ ಹುತಾತ್ಮರಾದ ಯೋಧರ ಗೌರವಾರ್ಥ ಶಿಲಾಫಲಕ ಗಳನ್ನು ಸ್ಥಾಪಿಸಲು ಇಲಾಖೆ ವತಿಯಿಂದ ಪ್ರತಿ ಪಂಚಾಯಿತಿಗೆ ಆರು ಸಾವಿರ ಅನುದಾನವನ್ನು ನೀಡಲಾಗುವುದು.  ಶಿಲಾಫಲಕವನ್ನು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಅಮೃತ ಸರೋವರ ಬಳಿ ಅಥವಾ ಅಮೃತ ಸರೋವರ ಲಭ್ಯವಿಲ್ಲದಿದ್ದಲ್ಲಿ ಗ್ರಾಮ ಪಂಚಾಯಿತಿ ಕಚೇರಿ ಅಥವಾ ಸರ್ಕಾರಿ ಶಾಲೆ ಬಳಿ ನಿರ್ಮಿಸಬೇಕು ಎಂದು ಹೇಳಿದರು.
ಸ್ವಾತಂತ್ರ‍್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಅಭಿವೃದ್ಧಿ ಭಾರತದ ನಿರ್ಮಾಣದಲ್ಲಿ ನಾನು ಪಾಲ್ಗೊಳ್ಳುವುದಾಗಿ, ಯಾವುದೇ ರೀತಿಯ ವಸಾಹತುಶಾಹಿ ಮನಸ್ಥಿತಿಯ ಕುರುಹನ್ನು ತೊಡೆದು ಹಾಕುವುದಾಗಿ, ನಮ್ಮ ಶ್ರೀಮಂತ  ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವುದಾಗಿ, ದೇಶದ ಏಕತೆ ಮತ್ತು ಒಗ್ಗಟ್ಟಾಗಿ ಶ್ರಮಿಸುವುದಾಗಿ ಹಾಗೂ ದೇಶಕ್ಕಾಗಿ ನನ್ನ ಕರ್ತವ್ಯ ಮತ್ತು ಜವಬ್ದಾರಿಯನ್ನು ನಿರ್ವಹಿಸುತ್ತೇನೆ ಎಂದು ಪಂಚಪ್ರಾಣ  ಶಪಥವನ್ನು ಮಾಡಬೇಕು ಎಂದು ಹೇಳಿದರು.
ಎಲ್ಲಾ ಪಂಚಾಯತಿಗಳಲ್ಲಿ ವಸುಧಾ ವಂದನ್ ಕಾರ್ಯಕ್ರಮದ ಅಂಗವಾಗಿ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ೧೦೦ ಸಸಿಗಳನ್ನು ಪಡೆದು ಅವುಗಳನ್ನು ನೆಟ್ಟು ಪೋಷಿಸಬೇಕು ಎಂದು ಹೇಳಿದರು.
ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಮಕ್ಕಳಿಗೆ ಸ್ಪರ್ಧೆಗಳನ್ನು ಏರ್ಪಡಿಸಬೇಕು. ಅಮೃತಸರೋವರ ತಾಣಗಳಲ್ಲಿ ಮಕ್ಕಳಿಗೆ ಚಿತ್ರಕಲೆ, ಘೋಷಣೆ ಬರೆಯುವುದು, ರಂಗೋಲಿ, ಭಾಷಣ ಸೇರಿದಂತೆ ಸ್ಪರ್ಧಾತ್ಮಕ ಚಟುವಟಿಕೆಗಳನ್ನು ಆಯೋಜಿಸಬೇಕು. ಸಾಂಪ್ರದಾಯಿಕ ಗ್ರಾಮೀಣ ಆಟಗಳನ್ನು ಹಾಗೂ ಜಾನಪದ ಸಂಪ್ರದಾಯಗಳಿಗೆ ಸಂಬAಧಿಸಿದ ಚಟುವಟಿಕೆಗಳನ್ನು ಆಯೋಜಿಸಬೇಕು ಎಂದು ಸೂಚಿಸಿದರು.
ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದೇಶಕ್ಕಾಗಿ ಹೋರಾಡಿ ಮರಣ ಹೊಂದಿರುವ  ವೀರಸೇನಾನಿಗಳ ಕುಟುಂಬದವರಿಗೆ, ಬದುಕಿರುವ ಸೇನಾನಿಗಳಿಗೆ, ಸ್ವಾತಂತ್ರ‍್ಯ ಹೋರಾಟಗಾರರು, ನಿವೃತ್ತ ರಕ್ಷಣಾ ಸಿಬ್ಬಂದಿ, ಕೇಂದ್ರ ಸಶಸ್ತç  ಪೊಲೀಸ್ ಪಡೆಗಳ ಅಧಿಕಾರಿಗಳನ್ನು ಆಹ್ವಾನಿಸಿ ಗೌರವಿಸಬೇಕು.   ವೀರಸೇನಾನಿಗಳ ಸೇವೆಯ ಮಹತ್ವ ಹಾಗೂ ದೇಶಪ್ರೇಮದ ಬಗ್ಗೆ ನಾಗರೀಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕೆಂದು ಹೇಳಿದರು.
ಹರ್ ಘರ್ ತಿರಂಗ ಅಭಿಯಾನವನ್ನು ಕಳೆದ ವರ್ಷದಂತೆ ಈ ಸಲವೂ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರತಿ ಮನೆಗಳಲ್ಲಿಯೂ, ಸರ್ಕಾರಿ ಕಚೇರಿಗಳು, ಸಾರ್ವಜನಿಕ ಕಟ್ಟಡಗಳು ಹಾಗೂ ಸಂಸ್ಥೆಗಳ ಮೇಲೆ ತ್ರಿವರ್ಣ ಧ್ವಜವನ್ನು ಆರಿಸಬೇಕೆಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.