Sunday, 13th October 2024

ಕ್ರೀಡಾ ಚಟವಟಿಕೆಗಳು ಸಮರ್ಥ ಕಾರ್ಯನಿರ್ವಹಣೆಗೆ ಸಹಕಾರಿ: ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್

ಚಿಕ್ಕಬಳ್ಳಾಪುರ: ಸಾರ್ವಜನಿಕ ಜನಜೀವನಕ್ಕೆ ನಿಕಟ ಸಂಪರ್ಕವಿರುವ ಪೊಲೀಸ್ ಇಲಾಖೆಯಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸಬೇಕಾದರೆ ನಿತ್ಯವೂ ಕ್ರೀಡಾ ಚಟವಟಿಕೆ ಗಳಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ ಎಂದು ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಅಭಿಪ್ರಾಯಪಟ್ಟರು.

ನಗರ ಹೊರವಲಯದ ಅಣಕನೂರು ಬಳಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣ ಪೊಲೀಸ್ ಮೈದಾನದಲ್ಲಿ ನಡೆದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾ ಕೂಟಕ್ಕೆ ಕ್ರೀಡಾ ಜ್ಯೋತಿ ಸ್ವೀಕರಿಸಿ ಬಲೂನ್‌ಗಳನ್ನು ಹಾರಿಬಿಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಉತ್ತಮ ಆರೋಗ್ಯಕ್ಕೆ ಕ್ರೀಡೆಯೂ ಆಧಾರವಾಗಿದೆ. ಪೊಲೀಸರು ದೈಹಿಕವಾಗಿ ಸದೃಢರಾಗಿರುವುದು ಅತಿ ಮುಖ್ಯವಾಗಿದೆ. ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಕ್ರೀಡಾಕೂಟದ ಮೂಲಕ ಮನಸ್ಸನ್ನು ಹಗುರಗೊಳಿಸಿಕೊಳ್ಳಬಹುದು ಎಂದು ಹೇಳಿದರು.

ಆಟೋಟಗಳಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮ ವಾಗಿರುತ್ತದೆ. ಮನಸ್ಸು ಲವಲವಿಕೆಯಿಂದಿದ್ದರೆ ಮಾತ್ರ ನಮ್ಮ ದಿನನಿತ್ಯದ  ಚಟುವಟಿಕೆಗಳು ಸಹ ಅತ್ಯುತ್ತಮವಾಗಿ ಇರುತ್ತವೆ.ನಿಯಮಿತವಾಗಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕ್ರೀಡಾಕೂಟದಲ್ಲಿ  ಪಾಲ್ಗೊಳ್ಳ ಬೇಕು’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ಮಾತನಾಡಿ, ‘ಕ್ರೀಡೆಗಳು ನಮ್ಮನ್ನು ಚಲನಶೀಲವಾಗಿ ಇಟ್ಟಿರುತ್ತವೆ. ಮನಸ್ಸು ಒತ್ತಡ ಮುಕ್ತವಾಗಲಿದ್ದು ಉಲ್ಲಾಸದಿಂದ ಸಾರ್ವಜನಿಕರ ಸೇವೆ ಮಾಡಲು ಅವಕಾಶ ಒದಗಲಿದೆ.ಹೀಗಾಗಿ ಕ್ರೀಡೆಗಳನ್ನು ಬದುಕಿನ ಅವಿಭಾಜ್ಯ ಅಂಗವಾಗಿಸಿಕೊಳ್ಳಬೇಕು’ ಎಂದು ಕರೆ ನೀಡಿದರು.

ಕ್ರೀಡಾ ಕೂಟದಲ್ಲಿ ಜಿಲ್ಲಾಧಿಕಾರಿ ಗುಂಡು ಎಸೆಯುವ ಮೂಲಕ ಕ್ರೀಡಾಸ್ಫೂರ್ತಿ ಮೆರೆದರು.ಈ ವೇಳೆ ಪೊಲೀಸ್ ತಂಡಗಳು ಕ್ರೀಡಾ ಕವಾಯತು ನಡೆಸಿದವು.

ವೇದಿಕೆಯಲ್ಲಿ ಡಿವೈಎಸ್‌ಪಿ ವಿ.ಕೆ.ವಾಸುದೇವ್,ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು. ನ.೨೧ರಂದು ಕ್ರೀಡಾಕೂಟದ ಸಮಾರೋಪ ನಡೆಯಲಿದೆ.