Friday, 25th October 2024

ಆಟೋ ಚಾಲಕರು ಉತ್ತಮ ಹೆಸರು ಗಳಿಸಿ: ಎಸ್‌ಆರ್‌ಎಸ್ ದೇವರಾಜ್

ಚಿಕ್ಕಬಳ್ಳಾಪುರ: ಸಮಾಜದಲ್ಲಿ ವೃತ್ತಿಯ ಜೊತೆಗೆ ಕನ್ನಡ ಪ್ರೀತಿ, ಭಾಷಾಭಿಮಾನ ಬೆಳೆವಣಿಗೆಯಲ್ಲಿ ತೊಡಗಿಸಿಕೊಂಡಿರುವ ಆಟೋ ಚಾಲಕರು ಗಳಿಸಿರುವ ಉತ್ತಮ ಹೆಸರನ್ನು ಉಳಿಸಿಕೊಂಡು ಹೋಗಬೇಕು ಎಂದು ಎಸ್‌ಆರ್‌ಎಸ್ ಅಕ್ಷತಾ ಚಾರಿಟ ಬಲ್ ಟ್ರಸ್ಟ್ ಅಧ್ಯಕ್ಷ ಎಸ್‌ಆರ್‌ಎಸ್ ದೇವರಾಜ್ ಹೇಳಿದರು.

ತಾಲ್ಲೂಕಿನ ಪೋಶೆಟ್ಟಿಹಳ್ಳಿ ಗ್ರಾಮದ ವೃತ್ತದಲ್ಲಿ ಜೈ ಮಾರುತಿ ಆಟೋ ನಿಲ್ದಾಣದಲ್ಲಿ ಆಟೋ ಚಾಲಕರು ಮಂಗಳವಾರ ಆಯೋಜಿಸಿದ್ದ ೬೭ ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕನ್ನಡ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪಮಾಲೆ ಹಾಕಿ ಪೂಜೆ ಸಲ್ಲಿಸಿ ಬಳಿಕ ಅವರು ಮಾತನಾಡಿದರು.

ಆಟೋ ಚಾಲಕರು ಕನ್ನಡ ಭಾಷೆ ಮೇಲೆ ಅಭಿಮಾನ ಹೊಂದಿದ್ದಾರೆ. ಆಟೋಗಳ ಮೇಲೆ ಕನ್ನಡದ ಸಂದೇಶ ಬರೆಸಿ, ಗಮನ ಸೆಳೆಯುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ನಿರಂತರ ಕನ್ನಡ ಉಳಿವಿಗಾಗಿ ಶ್ರಮಿಸುತ್ತಿರುವುದರ ಜೊತೆಗೆ ನಾಡಹಬ್ಬಗಳನ್ನು ಆಚರಿ ಸುತ್ತಿರುವುದು ಹೆಮ್ಮೆ ಪಡುವ ವಿಚಾರವಾಗಿದೆ ಎಂದು ತಿಳಿಸಿದರು.

ವಾಹನ ಚಾಲನೆ ಮಾಡುವ ವೇಳೆ ಚಾಲಕರು ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು. ವಾಹನ ಮತ್ತು ಸಂಬAಧಿಸಿದ ದಾಖಲೆಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದರ ಜೊತೆಗೆ ಸಂಚಾರಿ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸಿ, ಮೆಚ್ಚುಗೆಗೆ ಪಾತ್ರರಾಗಬೇಕು ಎಂದು ಸಲಹೆ ನೀಡಿದರು.

ಆಟೋ ಚಲಾಯಿಸುವಾಗ ಚಾಲಕರು ಮದ್ಯಪಾನ ಇನ್ನಿತರ ಕೆಟ್ಟ ಚಟಗಳನ್ನು ಮಾಡಬಾರದು. ಚಾಲನೆ ವೇಳೆ ಮೊಬೈಲ್ ಬಳಸಬೇಡಿ, ರಸ್ತೆ ಅಪಘಾತದ ಸಂದರ್ಭದಲ್ಲಿ ಮಾನವೀಯತೆಯನ್ನು ತೋರಬೇಕು. ಆಗಾಗ ವೈದ್ಯಕೀಯ ತಪಾಸಣೆಗೆ ಒಳಗಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಪ್ರಯಾಣಿಕರಿಗೆ ಸೇವೆ ನೀಡುವ ಉತ್ತಮ ವರ್ತನೆ ಇಟ್ಟುಕೊಂಡು ಒಳ್ಳೆಯ ಹೆಸರು ಪಡೆದುಕೊಳ್ಳಬೇಕು ಎಂದು ಚಾಲಕರಿಗೆ ಕಿವಿಮಾತು ಹೇಳಿದರು.

ಎಸ್‌ಆರ್‌ಎಸ್ ಅಕ್ಷತಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಾರ್ವಜನಿಕರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಈ ಸಂದರ್ಭದಲ್ಲಿ ಮುಖಂಡರಾದ ದೊಡಗಹಳ್ಳಿ ಲಕ್ಷ್ಮೀನರಸಿಂಹಪ್ಪ, ರವಿಕುಮಾರ್, ಆನಂದ್, ಗಂಗಾಧರ್, ಕುಲಮೇನಹಳ್ಳಿ ಲಕ್ಷ್ಮೀನರಸಿಂಹಪ್ಪ, ಸುರೇಶ್, ಲೋಕೇಶ್, ಕಿರಣ್, ನಾರಾಯಣಸ್ವಾಮಿ, ಮುನಿ, ಎಸ್‌ಆರ್‌ಎಸ್ ದೇವರಾಜ್ ಅಭಿಮಾನಿ ಗಳು, ಪೋಶೆಟ್ಟಿಹಳ್ಳಿ ಗ್ರಾಮಸ್ಥರು ಹಾಜರಿದ್ದರು.