Saturday, 26th October 2024

ಮಾತೃಭಾಷೆ ಎಂಬುದು ತಾಯಿಯಷ್ಟೇ ಉನ್ನತವಾದ ವಿಚಾರ: ಎಸ್‌ಆರ್‌ಎಸ್ ದೇವರಾಜ್

೬೭ ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಸರಕಾರಿ ಶಾಲೆಗಳಿಗೆ ಧ್ವನಿವರ್ಧಕ ವಿತರಣೆ

ಚಿಕ್ಕಬಳ್ಳಾಪುರ : ಮಾತೃಭಾಷೆಗೆ ತಾಯಿಯಷ್ಟೇ ಉನ್ನತವಾದ ಸ್ಥಾನಮಾನವಿದೆ. ಹೀಗಾಗಿ ತಾಯಿಗೆ ಕೊಡುವಂತಹ ಗೌರವ ಮತ್ತು ಪ್ರೀತಿಯನ್ನು ನಮ್ಮ ಮಾತೃಭಾಷೆ ಕನ್ನಡಕ್ಕೆ ಕೊಡಬೇಕು ಎಂದು ಎಸ್‌ಆರ್‌ಎಸ್ ಅಕ್ಷತಾ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಎಸ್‌ಆರ್‌ಎಸ್ ವಿ.ದೇವರಾಜ್ ತಿಳಿಸಿದರು.

೬೭ ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ತಾಲ್ಲೂಕಿನ ಬಂಡಮ್ಮನಹಳ್ಳಿ, ದೊಡಗೇನ ಹಳ್ಳಿ, ಕುಲಮೇನಹಳ್ಳಿ ಗ್ರಾಮದ ಸರಕಾರಿ ಶಾಲೆಗಳಿಗೆ ಎಸ್‌ಆರ್‌ಎಸ್ ಅಕ್ಷತಾ ಚಾರಿಟ ಬಲ್ ಟ್ರಸ್ಟ್ ವತಿಯಿಂದ ಉಚಿತವಾಗಿ ಧ್ವನಿವರ್ಧಕಗಳನ್ನು ವಿತರಿಸಿ ಮಾತನಾಡಿ ದರು.

ಕರ್ನಾಟಕದಲ್ಲಿ ಕನ್ನಡವೇ ಪ್ರಧಾನ ಭಾಷೆಯಾಗಿದ್ದು ಇಲ್ಲಿ ನೆಲೆಸುವ ಪ್ರತಿಯೊಬ್ಬರೂ ಕೂಡ ನಾಡು ನುಡಿ, ನೆಲ, ಜಲ, ಸಂಸ್ಕೃತಿಯ ಬಗ್ಗೆ ಅಭಿಮಾನ ಹೊಂದುವುದು ಅಗತ್ಯ ಮತ್ತು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ. ನಾವು ಕೇವಲ ನವೆಂಬರ್ ತಿಂಗಳಿನಲ್ಲಿ ಮಾತ್ರ ಕನ್ನಡ ಭಾಷೆ, ಸಂಸ್ಕೃತಿಯನ್ನು ನೆನಪಿಸಿಕೊಳ್ಳುವುದನ್ನು ಬಿಟ್ಟು ವರ್ಷದ ೩೬೫ದಿನವೂ ನಾಡು, ನುಡಿಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ನಮ್ಮೆಲ್ಲರಿಗೂ ಅನ್ನ ನೀಡುವ ಕನ್ನಡ ಭಾಷೆ ಜಗತ್ತಿನಲ್ಲೇ ವಿಶಿಷ್ಟ ಹಾಗೂ ವೈವಿಧ್ಯಮಯ ಭಾಷೆಯಾಗಿದೆ. ಎಲ್ಲ ರಂಗದಲ್ಲೂ ಕನ್ನಡ ಭಾಷೆ ಬಳಕೆಯಾಗಬೇಕು. ಇಂದಿನ ಮಕ್ಕಳು ಕನ್ನಡದ ಸಾಹಿತ್ಯ ಕೃತಿಗಳನ್ನು ಓದಿ ಅರ್ಥೈಸಿಕೊಳ್ಳಬೇಕು. ಮಾತೃಭಾಷೆ ಮತ್ತು ಮಾತೃಭೂಮಿಯನ್ನು ಯಾರೂ ಮರೆಯಬಾರದು. ಮಾತೃಭಾಷೆಯನ್ನು ಪ್ರೀತಿಸಬೇಕು. ಇದರಿಂದ ನಾಡಿನ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದರು.

ಇದೇ ಸಂದರ್ಭದಲ್ಲಿ ಮುಖಂಡರಾದ ಲಕ್ಷ್ಮೀನರಸಿಂಹಪ್ಪ ಅವರು ಶಾಲೆಯ ಮಕ್ಕಳಿಗೆ ಸಮವಸ್ತ್ರ ವಿತರಿಸಿದರು. ಈ ವೇಳೆ ದೊಡಗೇಹಳ್ಳಿ ಗ್ರಾಪಂ ಸದಸ್ಯ ಲಕ್ಷ್ಮೀನರಸಿಂಹಪ್ಪ, ಮುಖಂಡರಾದ ರವಿಕುಮಾರ್, ಆನಂದ್, ಗಂಗಾಧರ್, ಸುರೇಶ್, ಲೋಕೇಶ್, ಕಿರಣ್, ನಾರಾಯಣಸ್ವಾಮಿ, ಮುನಿ, ಎಸ್‌ಆರ್‌ಎಸ್ ದೇವರಾಜ್ ಅಭಿಮಾನಿಗಳು, ಪೋಶೆಟ್ಟಿಹಳ್ಳಿ ಗ್ರಾಮಸ್ಥರು ಹಾಜರಿದ್ದರು.