Saturday, 14th December 2024

ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣ: ಮೃತ್ತಿಕೆ ಸಂಗ್ರಹ ರಥಕ್ಕೆ ಚಾಲನೆ

ತುಮಕೂರು: ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ಅನಾವರಣದ  ಪ್ರಯುಕ್ತ ರಾಜ್ಯದ ಎಲ್ಲೆಡೆಯಿಂದ ಪವಿತ್ರ ಮೃತ್ತಿಕೆ(ಮಣ್ಣು) ಸಂಗ್ರಹ ಅಭಿಯಾನದ ರಥಕ್ಕೆ  ಭಾನುವಾರ ಚಾಲನೆ ನೀಡಲಾಯಿತು.

ಶಾಸಕ ಜಿ.ಬಿ. ಜ್ಯೋತಿಗಣೇಶ್, ಕ್ಯಾತ್ಸಂದ್ರ ಟೋಲ್ ಬಳಿ ಹೂವಿನಿಂದ ಅಲಂಕೃತವಾದ ಮೃತ್ತಿಕೆ ಸಂಗ್ರಹಿಸುವ ಕೆಂಪೇಗೌಡ ರಥವನ್ನು ಜಿಲ್ಲೆಗೆ ಬರಮಾಡಿಕೊಂಡರು.   ಬನ್ನಿ ನಾಡ ಕಟ್ಟೋಣ  ಎಂಬ ಸಂದೇಶ ಹೊತ್ತು ಬಂದ ರಥವನ್ನು  ಶಾಸಕರೊಂದಿಗೆ ಮಾಜಿ ಸಂಸದ, ಮುದ್ದಹನುಮೇಗೌಡ, ಮಾಜಿ ಶಾಸಕ ಸುರೇಶ್ ಗೌಡ, ಪಾಲಿಕೆ ಸದಸ್ಯರಾದ ಜೆ.ಕುಮಾರ್, ಧರಣೇಂದ್ರ ಕುಮಾರ್, ಪೊಲೀಸ್ ವರಿಷ್ಟಾಧಿಕಾರಿ ರಾಹುಲ್ ಕುಮಾರ್ ಶಹಪೂರ್ವಾಡ್, ಉಪವಿಭಾಗಾಧಿಕಾರಿ ವಿ. ಅಜಯ್, ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಸಣ್ಣ ಮಸಿಯಪ್ಪ, ತಹಸಿಲ್ದಾರ್ ಮೋಹನ್ ಕುಮಾರ್, ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಪಿಎಸ್‌ಐ ಮುರಳಿ, ಎಎಸ್‌ಐಗಳಾದ ಶಿವರಾಮ ಬಿ.ಜಿ. ಗೌಡ ಹಾಗೂ ರಾಮಚಂದ್ರಪ್ಪ,   ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನರಸಿಂಹರಾಜು, ಬ್ಯಾಟರಂಗೇಗೌಡ , ಬೆಳ್ಳಿಲೋಕೇಶ್ ಸಮುದಾಯದ ಮಹಿಳೆಯರು, ಸಾರ್ವಜನಿಕರು ಭವ್ಯವಾಗಿ ಸ್ವಾಗತಿಸಿದರು.

ನಂತರ ನಗರದ ಶೆಟ್ಟಿಹಳ್ಳಿ ಆಂಜನೇಯ ಸ್ವಾಮಿ ದೇವಾಲಯಕ್ಕೆ ಸಾಗಿದ ರಥಕ್ಕೆ ಪೂರ್ಣ ಗಕುಂಭ ಕಲಶ ಪೂಜೆ ಸಲ್ಲಿಸಿ ಮೃತ್ತಿಕೆ(ಮಣ್ಣು) ಸಂಗ್ರಹ ಕಾರ್ಯವನ್ನು ಪ್ರಾರಂಭಿಸ ಲಾಯಿತು. ಈ ವೇಳೆ ಹಾಜರಿದ್ದ ಜನಪ್ರತಿನಿಧಿಗಳು, ಅಧಿಕಾರಿಗಳು, ಸಮಾಜದ ಮುಖಂಡರು ಮೃತ್ತಿಕೆ ಹಾಕುವ ಮೂಲಕ ಧನ್ಯತಭಾವ ಮೆರೆದರು.

ಕೆಂಪೇಗೌಡ ರಥವು ಶೆಟ್ಟಿಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಮರಳೂರು ಆಂಜನೇಯ ಸ್ವಾಮಿ ದೇವಸ್ಥಾನ, ಬಿ.ಜಿ.ಎಸ್. ವೃತ್ತ, ಡಿಸಿ ಕಚೇರಿ, ಹೊರಪೇಟೆ ವೃತ್ತ, ಕುಂಚುಟಿಗರ ಭವನ, ಹನುಮಂತಪುರ ಕೊಲ್ಲಾಪುರದಮ್ಮ ದೇವಸ್ಥಾನ, ಬೆಳಗುಂಬ ಸಿದ್ದರಾಮೇಶ್ವರ ದೇವಸ್ಥಾನ ಮಾರ್ಗದಲ್ಲಿ ಸಂಚರಿಸಿ ಮೃತ್ತಿಕೆ ಸಂಗ್ರಹಿಸಲಿದೆ.

ಮೃತ್ತಿಕೆ ರಥದಲ್ಲಿ ಕೆಂಪೇಗೌಡರ ಕುರಿತು ಪ್ರಗತಿಯ ಪ್ರತಿಮೆ ಎಂಬ ಕಿರು ಚಿತ್ರದ ವೀಡಿಯೋ ಪ್ರದರ್ಶನ ಮಾಡಲಾಯಿತು.  ಈ ಐತಿಹಾಸಿಕ ಅಭಿಯಾನವನ್ನು ಬೆಂಬಲಿಸಲು ಮೊ.ಸಂ. 8955789789ಕ್ಕೆ ಮಿಸ್ಡ್ ಕಾಲ್ ನೀಡಬಹುದು.