ತುಮಕೂರು: 7 ವರ್ಷದ ಭಿಕ್ಷೆ ಬೇಡುವ ಅನಾಥ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಮೂವರು ಪೊಲೀಸ್ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತು ಮಾಡಿದ್ದಾರೆ.
ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಶಿವಣ್ಣ, ಕಾನ್ಸ್ಟೇಬಲ್ ಸಂತೋಷ್ ಹಾಗೂ ಮಹಿಳಾ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಕುಸುಮಾ ಅಮಾನತುಗೊಂಡಿದ್ದಾರೆ.
ಏನಿದು ಪ್ರಕರಣ?
ನಗರದ ಬಸ್ ನಿಲ್ದಾಣ ಬಳಿ ಭಿಕ್ಷೆ ಬೇಡುವ ಅನಾಥ 7 ವರ್ಷದ ಬಾಲಕಿಯನ್ನು ಪುಸಲಾಯಿಸಿ ಶಾಂತಿನಗರದ ಗೂಡ್ಸ್ ಶೆಡ್ ಕಾಲೋನಿಯ ಆಟೋ ಚಾಲಕ ಶಫಿ ಎಂಬಾತ ಆಟೋ ಗೆ ಹತ್ತಿಸಿಕೊಂಡು ನಗರದ ಸಮೀಪ ಕ್ಯಾತ್ಬಸಂದ್ರ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿ ದ್ದನು. ಈ ಸಂದರ್ಭದಲ್ಲಿ ಆರೋಪಿಯನ್ನು ರೆಡ್ ಹ್ಯಾಂಡೆಡ್ ಆಗಿ ಸಾರ್ವಜನಿಕರು ಹಿಡಿದು, ಬಾಲಕಿಯನ್ನು ರಕ್ಷಿಸಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದರು.
ಕ್ಯಾತ್ಸಂದ್ರ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿತ್ತು ಹಾಗೂ ಮಹಿಳಾ ಠಾಣೆಯಲ್ಲಿ ಪೋಕ್ಸೋ ಕೇಸು ದಾಖಲಾಗಿತ್ತು. ಈ ಬಗ್ಗೆ ಮಕ್ಕಳ ಆಯೋಗ ಕಳವಳ ವ್ಯಕ್ತಪಡಿಸಿತ್ತು.
*
ಜಿಲ್ಲೆಯಲ್ಲಿ ಶೂನ್ಯ ಪೋಕ್ಸೋ ಪ್ರಕರಣ ಸಾಧಿಸಲು ಜಿಲ್ಲಾ ಪೊಲೀಸ್ ಇಲಾಖೆ ಎಲ್ಲಾ ರೀತಿಯ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಕೆಲವು ತಾಂತ್ರಿಕ ಕಾರಣದಿಂದ ಮೂವರು ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ.
ಅಶೋಕ್, ಎಸ್ಪಿ, ತುಮಕೂರು.
*
ಅನಾಥ ಮಕ್ಕಳನ್ನು ರಕ್ಷಿಸಬೇಕಾದ ಜವಾಬ್ದಾರಿ ಸಂಬಂಧಿಸಿದ ಇಲಾಖೆಗಳ ಮೇಲಿದೆ. ಪೋಕ್ಸೋ ಪ್ರಕರಣಗಳು ನಡೆಯದಂತೆ ಇಲಾಖೆಗಳು ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಅನಾಥ ಬಾಲಕಿಯ ಪ್ರಕರಣ ಆಘಾತ ಮೂಡಿಸಿದೆ.
ತಿಪ್ಪೇಸ್ವಾಮಿ ಕೆ.ಟಿ., ಸದಸ್ಯರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ.