Sunday, 15th December 2024

ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲು ದೈವ ಕೃಪೆ ಇರಬೇಕು : ಹಿರೇಮಠ ಸ್ವಾಮೀಜಿ 

ತುಮಕೂರು: ವಿದ್ಯಾರ್ಥಿಗಳು ನಿರೀಕ್ಷಿತ ಫಲಿತಾಂಶ ಪಡೆಯಲು ಪ್ರಯತ್ನದ ಜತೆಗೆ ಅದೃಷ್ಟ ಮತ್ತು ದೈವಕೃಪೆ ಅಗತ್ಯ. ಅದೃಷ್ಟ ಮತ್ತು ದೈವಕೃಪೆ ಇಲ್ಲದಿದ್ದರೆ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಹಿರೇಮಠಾಧ್ಯಕ್ಷರಾದ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಅಮಾನಿಕೆರೆಯ ಗಾಜಿನ ಮನೆಯಲ್ಲಿ ಶ್ರೀ ಜಗನ್ಮಾತ ಮೂಕಾಂಬಿಕಾ ಸೇವಾ ಸಂಸ್ಥಾನ, ನನಸು ಪತ್ತಿನ ಸಹಕಾರ ಸಂಘ ಹಾಗೂ ಎಸ್‌ಆರ್‌ಎಸ್ ಇಂಟರ್‌ನ್ಯಾಷನಲ್ ಸ್ಕೂಲ್ ವತಿಯಿಂದ ಏರ್ಪಡಿಸಿದ್ದ ಶ್ರೀ ವಿದ್ಯಾಗಣವತಿ ಹಾಗೂ ಶ್ರೀ ವಸಂತ ಸರಸ್ವತಿ ಮಹಾಹೋಮ ಕಾರ್ಯಕ್ರಮದಲ್ಲಿ  ಮಾತ ನಾಡಿದರು.
ವಿದ್ಯಾರ್ಥಿಗಳು ಎಷ್ಟೇ ಚೆನ್ನಾಗಿ ಓದಿದರೂ ಅದೃಷ್ಟ ಮತ್ತು ದೈವಕೃಪೆ ಇಲ್ಲದಿದ್ದರೆ ಒಂದೊಂದು ಬಾರಿ ನಿರೀಕ್ಷಿತ ಫಲಿತಾಂಶ ಬರುವುದಿಲ್ಲ. ಹಾಗಾಗಿ ಪ್ರಯತ್ನದ ಜತೆಗೆ ದೈವಕೃಪೆಯೂ ಮುಖ್ಯ. ಫೆಬ್ರವರಿ ಮಾಸ ಕಳೆಯುತ್ತಿದ್ದಂತೆ ಮಾರ್ಚ್ ಮಾಸ ಬಂದರೆ ಪರೀಕ್ಷಾ ಮಾಸ ಎಂದರ್ಥ. ಹಾಗಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ವಿದ್ಯಾಗಣಪತಿ ಹಾಗೂ ವಸಂತ ಸರಸ್ವತಿ ಮಹಾಹೋಮ ಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ. ಇದರ ಲಾಭವನ್ನು ವಿದ್ಯಾರ್ಥಿಗಳು ಹಾಗೂ ಪೋಷಕರು ಪಡೆದುಕೊಳ್ಳಬೇಕು ಎಂದರು.
ಶ್ರೀ ಜಗನ್ಮಾತ ಮೂಕಾಂಬಿಕಾ ಸೇವಾ ಸಂಸ್ಥಾನದ ಡಾ. ವಿಜಯನರಸಿಂಹಾನಂದ ಗುರೂಜಿ ಮಾತನಾಡಿ, ಗುರು ಹಿರಿಯರು ಹಾದು ಹೋದಂತಹ ಮಹಾ ಸ್ಥಳ ತುಮಕೂರು. ಇಡೀ ಭಾರತದಲ್ಲೇ ನಡೆದಾಡುವ ದೇವರು ಎಂದು ಹೆಸರು ಪಡೆದಂತಹ ಶ್ರೀ ಶಿವಕುಮಾರ ಸ್ವಾಮೀಜಿಯವರ ಮಹಾನಿಧಿ ಈ ಸ್ಥಳವಾಗಿದೆ. ಇಲ್ಲಿ  ಭಕ್ತಿಭಾವ ಹೆಚ್ಚಾಗಿದೆ. ಮಠಮಾನ್ಯಗಳು ಸಹ ಸೇವಾ ಕಾರ್ಯದಲ್ಲಿ ತೊಡಗಿವೆ. ಆದರೆ ಬೆಂಗಳೂರು ಮಹಾನಗರದಲ್ಲಿ ಮಠಮಾನ್ಯ ಗಳ ಸಂಖ್ಯೆಯೂ ಕ್ಷೀಣ ಸಿದೆ ಎಂದರು.
ಕಾಂಗ್ರೆಸ್ ಮುಖಂಡ  ಮುರುಳೀಧರ ಹಾಲಪ್ಪ ಮಾತನಾಡಿ, ತುಮಕೂರು ನಗರ ಮತ್ತು ಜಿಲ್ಲೆ ಸುಭಿಕ್ಷೆಯಾಗಿ, ಸಮೃದ್ಧಿಯಾಗಿ ಇರಲಿ ಎಂದು ಹಾರೈಸಿ ಮಹಾಹೋಮ ಮಾಡಿರುವುದು ಒಳ್ಳೆಯ ಕಾರ್ಯವಾಗಿದೆ ಎಂದರು. ನನಸು ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ನಾಗಮಣಿ  ಮಾತನಾಡಿದರು.
ಕಾರ್ಯಕ್ರಮದಲ್ಲಿ ಮೈದಾಳ ಆಶ್ರಮದ ಲೇಪಾಕ್ಷಯ್ಯ, ಕೆ.ಆರ್. ಕೃಷ್ಣ, ನಟರಾಜಶೆಟ್ಟಿ , ಕಲ್ಪನಾ ಮುರುಳೀಧರ ಹಾಲಪ್ಪ, ತೇಜಸ್, ಜಯಲಕ್ಷ್ಮಿ , ಶಾರದಾ ಹಾಗೂ ವಿವಿಧ ಶಾಲೆಗಳ ಮಕ್ಕಳು ಭಾಗವಹಿಸಿದ್ದರು.