Friday, 20th September 2024

Tahsildar Visit: ಮುರುಗಮಲೆ ಧಾರ್ಮಿಕ ಕ್ಷೇತ್ರದಲ್ಲಿ ಕೋಳಿತ್ಯಾಜ್ಯ ಕಾಟ; ತಹಶೀಲ್ದಾರ್ ಭೇಟಿ ಪರಿಶೀಲನೆ

ಚಿಂತಾಮಣಿ: ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವ ಶ್ರದ್ಧಾ ಕೇಂದ್ರವಾದ ಮುರುಗಮಲೆಯ ಹಜರತ್ ಅಮ್ಮಾ ಜಾನ್ ಬಾಬಾಜಾನ್ ದರ್ಗಾ ಸಮೀಪ ವಕ್ಫ್ ಆಸ್ತಿಯಲ್ಲಿ ಅಕ್ರಮವಾಗಿ ಚಿಕನ್ ಅಂಗಡಿ ಇಟ್ಟುಕೊಂಡಿರುವ ಕೆಲವರು, ಇಲ್ಲಿ ಬಿಕರಿಯಾಗುವ ಕೋಳಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ, ಎಲ್ಲೆಂದರಲ್ಲಿ ಎಸೆಯುತ್ತಿರುವುದರಿಂದ ದರ್ಗಾಗೆ ಬರುವ ಭಕ್ತಾದಿಗಳು ಸಾರ್ವಜನಿಕರು ಕಿರಿ ಕಿರಿ ಅನುಭವಿಸುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆ ತಹಶೀಲ್ದಾರ್ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಅಕ್ರಮ ಅಂಗಡಿಗಳ ತೆರವು ಮಾಡಿ, ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮ ವಹಿಸುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚನೆ ನೀಡಿದರು.

ಏನಿದು ಪ್ರಕರಣ?
ರಾಜ್ಯದ ಹಿಂದೂ ಮುಸ್ಲಿಮರ ಭಾವೈಕ್ಯತೆಯ ಕೇಂದ್ರ ಹಾಗೂ ಪುಣ್ಯ ತಾಣವಾಗಿರುವ ಚಿಂತಾಮಣಿ ತಾಲೂಕಿನ ಮುರುಗಮಲ್ಲ ಗ್ರಾಮದ ಹಜರತ್ ಅಮ್ಮಾಜಾನ್ ಬಾಬಾಜಾನ್ ದರ್ಗಾ ಸಮೀಪ ವಕ್ಫ್ ಆಸ್ತಿಯಲ್ಲಿ ಅಕ್ರಮವಾಗಿ ಇಟ್ಟುಕೊಂಡಿರುವ ಚಿಕನ್ ಅಂಗಡಿಗಳವರು ಕೋಳಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವುದರಿಂದ ದರ್ಗಾಗೆ ಬರುವ ಭಕ್ತಾದಿಗಳು ಸೇರಿದಂತೆ ಸಾರ್ವಜನಿಕರು ನರಕಯಾತನೆ ಅನುಭವಿಸುತ್ತಿದ್ದಾರೆ ಎಂದು ಭಕ್ತರು ನೋವನ್ನು ತೋಡಿಕೊಂಡಿದ್ದರು.

ಧಾರ್ಮಿಕ ಕ್ಷೇತ್ರದಲ್ಲಿ ನೈರ್ಮಲ್ಯ ಕಾಪಾಡುವ ಬದಲಿಗೆ ಚಿಕನ್ ಅಂಗಡಿಗಳ ಕೋಳಿಯ ರೆಕ್ಕೆಪುಕ್ಕ ಹಾಗೂ ಇತರೆ ತ್ಯಾಜ್ಯಗಳನ್ನು ವಕ್ಫ್ ಮಂಡಳಿಗೆ ಸೇರಿದ ಜಾಗದಲ್ಲಿ ಎಸೆಯುತ್ತಿದ್ದಾರೆ. ಇದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ದುರ್ವಾಸನೆ ಹರಡಿದ್ದು,ಆ ಭಾಗಗಳಲ್ಲಿ ಸಂಚರಿಸುವ ಜನರು ಮೂಗು ಮುಚ್ಚಿಕೊಂಡು ಓಡಾಡಬೇಕಿದ್ದು ಸಂಬಂಧಪಟ್ಟವರು ಇತ್ತ ಗಮನ ಹರಿಸಿ ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಒತ್ತಾಯಿಸಿದ್ದರು.

ಬುಧವಾರ ಆ ಜಾಗಕ್ಕೆ ತಾಲ್ಲೂಕು ದಂಡಾಧಿಕಾರಿಗಳಾದ ಸುದರ್ಶನ್ ಯಾದವ್, ತಾಲೂಕ್ ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ಆನಂದ, ವಕ್ಫ್ ಬೋರ್ಡ್ ಅಧಿಕಾರಿ ನವೀದ್ ಪಾಷಾ,ದರ್ಗಾ ಮೇಲ್ವಿಚಾರಕರಾದ ತಯೂಬ್ ನವಾಜ್,ಕಂದಾಯ ಇಲಾಖೆಯ ರೆವಿನ್ಯೂ ಇನ್ಸ್ಪೆಕ್ಟರ್ ಅಬ್ದುಲ್ ಖಾದರ್, ಗ್ರಾಮ ಆಡಳಿತ ಅಧಿಕಾರಿ ದಲಾಯಿಲ್ ಖಾನ್,ದರ್ಗಾ ಕಾರ್ಯದರ್ಶಿ ಆರಿಫ್ ಖಾನ್, ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ, ಅಕ್ರಮವಾಗಿ ಇಟ್ಟುಕೊಂಡಿ ರುವ ಅಂಗಡಿಗಳನ್ನು ತೆರವುಗೊಳಿಸಿ ಕೋಳಿ ತ್ಯಾಜ್ಯ ಎಸೆಯುತ್ತಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಗ್ರಾಪಂ ಅಧಿಕಾರಿಗಳಿಗೆ ಸೂಚನೆ ನೀಡಿದರು.