Sunday, 15th December 2024

ತಹಶೀಲ್ದಾರರು ಕಡ್ಡಾಯವಾಗಿ ಮತಗಟ್ಟೆಗಳಿಗೆ ಭೇಟಿ ನೀಡಬೇಕು: ಜಿಲ್ಲಾಧಿಕಾರಿ 

ತುಮಕೂರು: ಜಿಲ್ಲೆಯ ಎಲ್ಲಾ ತಹಶೀಲ್ದಾರ್‌ಗಳು ತಮ್ಮ ವ್ಯಾಪ್ತಿಯ ಎಲ್ಲಾ ಮತಗಟ್ಟೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿ, ಮತಗಟ್ಟೆಗಳಲ್ಲಿ ಮೂಲ ಸೌಕರ್ಯ ಒದಗಿಸುವಿಕೆ ಮತ್ತು ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು  ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಸೂಚಿಸಿದರು.
ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಮಾತನಾಡಿದ ಅವರು, ಅಧಿಕಾರಿಗಳು ತಮ್ಮ ವ್ಯಾಪ್ತಿಯ ಮತಗಟ್ಟೆಗಳಿಗೆ ಸ್ವತಃ ಭೇಟಿ ನೀಡಬೇಕು. ರ‍್ಯಾಂಪ್, ಶೌಚಾಲಯ, ಕಟ್ಟಡ ಬಣ್ಣ, ದುರಸ್ತಿ ಕುರಿತು ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.
ತಹಶೀಲ್ದಾರ್‌ಗಳು ಸ್ಮಶಾನ ಭೂಮಿಯನ್ನು ಪಿಡಿಓಗಳಿಗೆ ಪಕ್ಕಾ ಹಸ್ತಾಂತರ ಮಾಡಬೇಕು.  ತದನಂತರ ಪಿಡಿಓಗಳು ಈ ಕುರಿತಂತೆ ಗ್ರಾಮದಲ್ಲಿ ಟಾಂಟಾಂ ಹೊರಡಿಸಬೇಕು.  ಸರ್ಕಾರಿ ಜಮೀನಾಗಿದ್ದಲ್ಲಿ ಸ್ಮಶಾನಕ್ಕಾಗಿ ಬೌಂಡರಿ ನಿಗಧಿಪಡಿಸಿ, ಸರ್ವೇ ಮಾಡಿಸಿ ಮಹಜರ್ ಮಾಡಿ, ಹ್ಯಾಂಡ್ ಸ್ಕೆಚ್ ಮಾಡುವ ಮೂಲಕ ಜಾಗವನ್ನು ಸ್ಮಶಾನಕ್ಕಾಗಿ ಮೀಸಲಿರಿಸಬೇಕು ಎಂದು ತಹಶೀಲ್ದಾರ್ ಅವರಿಗೆ ಸೂಚಿಸಿದರು.
ಶಾಲಾ ಕಟ್ಟಡಗಳ ನಿವೇಶನಗಳಿಗೆ ಖಾತಾ ಮಾಡಿಕೊಡುವ ಪ್ರಕ್ರಿಯೆಯನ್ನು ಆದ್ಯತೆ ಮೇರೆಗೆ ಮುಗಿಸುವಂತೆ ಸೂಚಿಸಿದ ಅವರು, ಗೋಮಾಳ ಗಳಲ್ಲಿ ಗ್ರಾಂಟ್‌ಆಗಿ, ಸಾಗುವಳಿ ಚೀಟಿ ಕೊಟ್ಟು, ಖಾತೆಯಾಗಿರುವಂತಹ ಪಟ್ಟಿಗಳನ್ನು ಕಳುಹಿಸುವಂತೆ ಸೂಚಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಫೆಬ್ರವರಿ 6 ರಂದು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‌ನ ಹೆಲಿಕಾಪ್ಟರ್ ಉತ್ಪಾದನಾ ಘಟಕ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಲಿದ್ದು, ಸಕಲ ಜೀವರಕ್ಷಕ ವ್ಯವಸ್ಥೆಗಳುಳ್ಳ ಆಂಬುಲೆನ್ಸ್ ಸೇರಿದಂತೆ ಎಲ್ಲಾ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವಂತೆ ಡಿಹೆಚ್‌ಓ ಮತ್ತು ಜಿಲ್ಲಾ ಶಸ್ತçಚಿಕಿತ್ಸಕರಿಗೆ ಸೂಚಿಸಿದರು.
ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ತುಮಕೂರು ಜಿಲ್ಲೆಯಲ್ಲಿ ಯಾವುದೇ ಪ್ರಕರಣ ವರದಿಯಾಗದಂತೆ ಕಟ್ಟೆಚ್ಚರ ವಹಿಸಬೇಕು. ಬಸ್ ಹಾಗೂ ರೈಲು ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಮತ್ತು ಜಿಲ್ಲೆಯ ಜನತೆ ಕೋವಿಡ್ ಮುನ್ನೆಚ್ಚರಿಕೆ ಪಾಲಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಕೆ. ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ, ಮತ್ತಿತರರು ಹಾಜರಿದ್ದರು.