Friday, 20th September 2024

Inner Reservation: ಒಳ ಮೀಸಲಾತಿಗಾಗಿ ಒತ್ತಾಯಿಸಿ ಸೆಪ್ಟಂಬರ್ 12ರಂದು ಗುರುವಾರ ಬೃಹತ್ ತಮಟೆ ಚಳುವಳಿ

ಗುಬ್ಬಿ: ಸೆಪ್ಟೆಂಬರ್ 12 ರಂದು ಗುರುವಾರ ಪ್ರೊ. ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ರಾಜ್ಯ ಸಂಚಾಲಕ ಎಂ ಗುರುಮೂರ್ತಿ ಶಿವಮೊಗ್ಗ ಅವರ ನೇತೃತ್ವದಲ್ಲಿ ರಾಜ್ಯದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲದಲ್ಲಿ ಬೃಹತ್ ತಮಟೆ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಮಾರಶೆಟ್ಟಿ ಹಳ್ಳಿ ಬಸವರಾಜು ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪ್ರತೀಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಪರಿಶಿಷ್ಟ ಜಾತಿಯೊಳಗಿನ ಉಪಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಸಂವಿಧಾನ ಬದ್ಧವಾದ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನು ರಾಜ್ಯ ಸರ್ಕಾರ ಕೂಡಲೇ ಅನುಷ್ಠಾನಗೊಳಿಸಬೇಕು ಎಂದರು.

ತಾಲೂಕು ಸಂಘಟನಾ ಸಂಚಾಲಕ ಜಿ ಅರಿವೇಸಂದ್ರ ಕೃಷ್ಣಪ್ಪ ಮಾತನಾಡಿ ತುಮಕೂರು ಜಿಲ್ಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬೃಹತ್ ತಮಟೆ ಚಳುವಳಿ ನಡೆಸುವ ಮೂಲಕ ಒಳ ಮೀಸಲಾತಿ ಹೋರಾಟವನ್ನು ನಡೆಸುತ್ತಿದ್ದು. ದೀನ ದಲಿತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸರ್ಕಾರವನ್ನು ಎಚ್ಚರಗೊಳಿಸುವ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.

ಆದಿ ಜಾಂಬವ ಯುವ ಬ್ರಿಗೇಡ್ ತಾಲೂಕ ಅಧ್ಯಕ್ಷ ಬಸವರಾಜು ಗುಬ್ಬಿ ಮಾತನಾಡಿ ಒಳ ಮೀಸಲಾತಿಗಾಗಿ ಅನೇಕ ಹೋರಾಟಗಳು ನಡೆದಿದ್ದು. ಹೋರಾಟದ ಫಲವಾಗಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಇದನ್ನು ಮನಗೊಂಡು ರಾಜ್ಯ ಸರ್ಕಾರ ಕೂಡಲೆ ಸಮುದಾಯದ ಜನರಿಗೆ ನ್ಯಾಯ ಒದಗಿಸಿಕೊಡಬೇಕು. ಈ ಒಂದು ಹೋರಾಟಕ್ಕೆ ಆದಿ ಜಾಂಬವ ಯುವ ಬ್ರಿಗೇಡ್ ನ ಸಂಪೂರ್ಣ ಸಹಕಾರವಿದೆ ಎಂದು ತಿಳಿಸಿದರು.

ಹಿರಿಯ ಸಲಹೆಗಾರ ಮಡೇನಹಳ್ಳಿ ದೊಡ್ಡಯ್ಯ ಮಾತನಾಡಿ ಪ್ರೊಫೆಸರ್ ಬಿ ಕೃಷ್ಣಪ್ಪನವರ ಜನ್ಮ ದಿನ ಜೂನ್ 9ರಂದು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಬೇಕು ಹಾಗೂ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು. ವಸತಿ ನಿಲಯಗಳಲ್ಲಿ ಹೊರ ಸಂಪನ್ಮೂಲದಡಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರನ್ನು ಕಾಯಂಗೊಳಿಸಬೇಕು. ಬಾಕಿ ಉಳಿದಿರುವ ಬ್ಯಾಕ್ ಲಾಕ್ ಹುದ್ದೆಗಳನ್ನು ರಾಜ್ಯ ಸರ್ಕಾರ ತಕ್ಷಣ ಭರ್ತಿ ಮಾಡಬೇಕೆಂಬ ಹಲವು ಹೊಕ್ಕುತ್ತಾಯ ಗಳನ್ನು ಬೃಹತ್ ತಮಟೆ ಚಳುವಳಿಯ ಮೂಲಕ ಮಂಡಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಕುಂದು ಕೊರತೆ ವಿಭಾಗದ ಸಿ ಎಸ್ ಪುರ ಬೆಟ್ಟಸ್ವಾಮಿ, ತಾಲೂಕು ಉಸ್ತುವಾರಿ ನರೇಂದ್ರ ಕುಮಾರ್ ( ಕಪಾಲಿ ), ಕಾರ್ಮಿಕ ಒಕ್ಕೂಟದ ಸುರೇಶ್ ಕುಂದರನಹಳ್ಳಿ, ನಗರ ಸಂಚಾಲಕ ಕೃಷ್ಣಸ್ವಾಮಿ, ಆಂತರಿಕ ಶಿಸ್ತು ವಿಭಾಗದ ನಿಟ್ಟೂರ್ ಜಗದೀಶ್ ಮುಂತಾದವರಿದ್ದರು.