ರಾಜ್ಯ ಸರಕಾರಿ ನೌಕರರ ಸಂಘಟನೆಯಿ0ದ ಬೆಂಬಲ ಘೋಷಣೆ
ಚಿಕ್ಕಬಳ್ಳಾಪುರ : ಜಿಲ್ಲಾಡಳಿತ ಭವನದ ಎದುರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮೀಣಾ ಭಿವೃದ್ದಿ ಮತ್ತು ಪಂಚಾಯತ್‌ರಾಜ್ ಇಲಾಖೆ ನೌಕರರ ವಿವಿಧ ವೃಂದಗಳ ಅಧಿಕಾರಿ ನೌಕರರು ನಡೆಸುತ್ತಿರುವ ಅನಿರ್ಧಿಷ್ಟ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಜಿಲ್ಲಾಧ್ಯಂತ ಇರುವ ಗ್ರಾಮಪಂಚಾಯಿತಿ ಕಚೇರಿಗಳನ್ನು ಬಂದ್ ಮಾಡಿ ನಡೆಸುತ್ತಿರುವ ಹೋರಾಟಕ್ಕೆ ಮಂಗಳವಾರ ಜಿಲ್ಲಾ ಸರಕಾರಿ ನೌಕರರ ಸಂಘಟನೆ ಬೆಂಬಲ ವ್ಯಕ್ತಪಡಿಸಿದ್ದು ಹೋರಾಟ ಇನ್ನೂ ಗಟ್ಟಿಯಾಗಿ ಮುಂದುವರೆಯುವ ಸೂಚನೆ ನೀಡಿದೆ.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘಟನೆಯ ಜಿಲ್ಲಾಧ್ಯಕ್ಷ ಜಿ.ಹರೀಶ್ ಮಾತನಾಡಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಇಲಾಖೆ ವಿವಿಧ ವೃಂದಗಳ ಅಧಿಕಾರಿ ಮತ್ತು ನೌಕರ ವರ್ಗ ನಡೆಸುತ್ತಿರುವ ಹೋರಾಟ ನ್ಯಾಯ ಯುತವಾಗಿದೆ. ನಿಮ್ಮ ಎಲ್ಲಾ ಬೇಡಿಕೆಗಳು ಹತ್ತಾರು ವರ್ಷಗಳಷ್ಟು ಹಳೆಯ ಬೇಡಿಕೆಗಳೇ ಆಗಿದ್ದು ಎಲ್ಲವೂ ನ್ಯಾಯಯುತವಾಗಿವೆ. ಈಗಲಾದರೂ ಎಚ್ಚೆತ್ತುಕೊಂಡು ಸರಕಾರಕ್ಕೆ ಮನವಿ ಸಲ್ಲಿಸಿ ಹಕ್ಕುಗಳನ್ನು ಪಡೆಯಲು ಮುಂದಾಗಿರುವುದು ಸಂತೋಷದ ಸಂಗತಿ.ಇದೇ ರೀತಿ ಒಗ್ಗಟ್ಟಿನಿಂದ ಹೋರಾಟ ಮುಂದುವರೆಸಿದ್ದೇ ಆದಲ್ಲಿ ಸರಕಾರ ಬೇಡಿಕೆ ಈಡೇರಿಸಲಿದೆ.ನಿಮ್ಮ ಹೋರಾಟಕ್ಕೆ ಜಿಲ್ಲಾ ಸರಕಾರಿ ನೌಕರರ ಸಂಘಟನೆ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.
ಪಿಡಿಒ ಅಧಿಕಾರಿಗಳ ಸಂಘಟನೆಯ ಜಿಲ್ಲಾಧ್ಯಕ್ಷ ಮೋಹನ್ ಮಾತನಾಡಿ ಜಿಲ್ಲಾ ಸರಕಾರಿ ನೌಕರರ ಸಂಘಟನೆ ನಮ್ಮ ಹೋರಾಟಕ್ಕೆ ಬೆಂಬಲ ನೀಡಿರುವುದು ಹೋರಾಟಕ್ಕೆ ಹೆಚ್ಚಿನ ಶಕ್ತಿಬಂದ0ತಾಗಿದೆ. ರಾಜ್ಯ ಸಮಿತಿ ತೀರ್ಮಾನ ದಂತೆ ರಾಜ್ಯದ ಉದ್ದಗಲಕ್ಕೂ ಇರುವ ಜಿಲ್ಲಾ ಪಂಚಾಯಿತಿ ಸಿಇಒ ಕಚೇರಿ ಎದುರು ಸೋಮವಾರದಿಂದ ಅನಿರ್ಧಿಷ್ಟಾವಧಿ ಪ್ರತಿಭಟನಾ ಧರಣಿ ನಡೆಯುತ್ತಿದ್ದು ಎರಡನೇ ದಿನಕ್ಕೆ ಕಾಲಿಟ್ಟಿದೆ. ನಮ್ಮ ವಿವಿಧ ಬೇಡಿಕೆಗಳನ್ನು ಸರಕಾರ ಈಡೇರಿಸುವವರೆಗೂ ನಮ್ಮ ಈ ಅನಿರ್ದಿಷ್ಟ ಹೋರಾಟವನ್ನು ಕೈ ಬಿಡುವುದಿಲ್ಲ.ಈ ಪ್ರತಿಭಟನೆ ಹೀಗೆ ಮುಂದುವರೆಯುತ್ತದೆ ಎಂದರು.
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಮತ್ತು ಎಲ್ಲಾ ನೌಕರರ ವೃಂದದ ಸಂಘದ ಜಿಲ್ಲಾಧ್ಯಕ್ಷರು ಪದಾಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಹಾಗೂ ಎಸ್ ಡಿಎಎ ಕರ ವಸೂಲಿಗಾರರು, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ನೀರು ಗಂಟೆಗಳು, ಸ್ವಚ್ಛತಾಗಾರರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಭಾಗವಹಿಸಿದ್ದರು.