Friday, 20th September 2024

Railway Tender: ರೈಲ್ವೆ ಕಾಮಗಾರಿಗೆ ಟೆಂಡರ್ -ಸ್ಥಳ ಪರಿಶೀಲನೆ

ತುಮಕೂರು: ನಗರದ ನಾಗರೀಕರ ಬಹುದಿನಗಳ ಬೇಡಿಕೆಯಾದ ಶೆಟ್ಟಿಹಳ್ಳಿ ಗೇಟ್ ಬಳಿ ಪಾದಚಾರಿ ಸಬ್ ವೇ, ಭೀಮಸಂದ್ರದ ರೈಲ್ವೇ ಕೆಳ ಸೇತುವೆ (ಲಘು ವಾಹನಗಳ ಸಂಚಾರಕ್ಕಾಗಿ) ಕಾಮಗಾರಿಗಳಿಗೆ ಈಗಾಗಲೇ ಸಚಿವರ ಸೂಚನೆಯ ಮೇರೆಗೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ಕೈಗೊಳ್ಳಲು ಟೆಂಡರ್ ಕರೆಯಲಾಗಿದೆ. ಈ ಕಾಮಗಾರಿಗಳಿಗೆ ಅನುಮೋ ದನೆ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರು, ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಹಾಗೂ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರಿಗೆ ನಗರದ ನಾಗರೀಕರ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.

ನಗರದಲ್ಲಿ ಶೆಟ್ಟಿಹಳ್ಳಿ ಗೇಟ್ ಬಳಿ ಪಾದಚಾರಿ ಸಬ್ ವೇ ಕಾಮಗಾರಿಗೆ ರೂ.2.48 ಕೋಟಿ ಹಾಗೂ ಭೀಮಸಂದ್ರದ ರೈಲ್ವೇ ಕೆಳ ಸೇತುವೆ (ಲಘು ವಾಹನಗಳ ಸಂಚಾರಕ್ಕಾಗಿ) ನಿರ್ಮಾಣಕ್ಕೆ ರೂ.1.87 ಕೋಟಿಯ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಈ ಭಾಗದ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಲಿದೆ ಇದರಿಂದಾಗಿ ಸಾರ್ವಜನಿಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ ಎಂದು ಶಾಸಕರು ತಿಳಿಸಿದರು.

*

ಕಳೆದ 10 ವರ್ಷಗಳಿಂದ ಭೀಮಸಂದ್ರ ಹಳೇ ಗ್ರಾಮದ ಜನರು ಸುಲಭ ಸಂಚಾರ ಮಾಡಲಾಗದೆ, ವನವಾಸ ಅನುಭವಿಸುತ್ತಿದ್ದರು. ಈ ವನವಾಸದಿಂದ ಮುಕ್ತಗೊಳಿಸಿದ ಇಂದಿನ ರೈಲ್ವೆ ರಾಜ್ಯ ಖಾತೆ ಸಚಿವರು, ನಮ್ಮ ಹೆಮ್ಮೆಯ ಸಂಸದರಾದ ಸೋಮಣ್ಣ ಹಾಗೂ ಈ ಹಿಂದೆ ಸಂಸದರಾದ ಜಿ.ಎಸ್.ಬಸವರಾಜ್ ಅವಿರತ ಪ್ರಯತ್ನದಿಂದ ಹಾಗೂ ಸಂಚಾರ ಸಮಸ್ಯೆ ಉಂಟಾದಂತಹ ಎಲ್ಲಾ ಸಂದರ್ಭದಲ್ಲೂ ಸಮಸ್ಯೆಗಳನ್ನು ಬಗೆಹರಿಸಿ, ರೈಲ್ವೆ ಕೆಲಸೇತುವೆ (ಲಘು ಸೇತುವೆ) ಕಾಮಗಾರಿ ನಿರ್ಮಾಣವಾಗಲು ಕಾರಣ ಭೂತರಾದ ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ರವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
– ಮನೋಹರ್‌ಗೌಡ, ಮುಖಂಡರು, ವಾರ್ಡ್-06, ತುಮಕೂರು

*

ಶೆಟ್ಟಿಹಳ್ಳಿ ರೈಲ್ವೆ ಕೆಳಸೇತುವೆಯ ಎರಡು ಬದಿಯಲ್ಲಿ ರೈಲ್ವೆ ಇಲಾಖೆಯವರ ಎರಡು ಕಡೇ ಕಾಂಪೌAಡ್ ಹಾಕಲಾಗಿ ಅಲ್ಲಿನ ವಿಜಯನಗರ ಬಡಾವಣೆ, ರಾಘವೇಂದ್ರನಗರ ಬಡಾವಣೆ, ಮಾರುತಿನಗರ ಬಡಾವಣೆಯ ನಾಗರೀಕರು ತುಮಕೂರು ಕಡೇ, ಸೋಮೇಶ್ವರಪುರಂ ಕಡೇ ಸಂಚರಿಸಲು ತುಂಬಾ ತೊಂದರೆ ಉಂಟಾಗಿ, ಹೋರಾಟ ನಡೆಸಿದ ಸಂದರ್ಭದಲ್ಲಿ ನಗರ ಶಾಸಕರು ಆಶ್ವಾಸನೆ ಕೊಟ್ಟಿದ್ದರು. ಕೊಟ್ಟ ಆಶ್ವಾಸನೆಯಂತೆ ಶೆಟ್ಟಿಹಳ್ಳಿ ಗೇಟ್ ಬಳಿ ಪಾದಚಾರಿ ಸಬ್ ವೇ ನಿರ್ಮಾಣ ಮಾಡುತ್ತಿರುವುದು ತುಂಬಾ ಸಂತಸದ ವಿಷಯವಾಗಿದೆ. ಇದಕ್ಕೆ ಕಾರಣಕರ್ತರಾದ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವರು ಹಾಗೂ ತುಮಕೂರಿನ ಸಂಸದರಾದ ವಿ.ಸೋಮಣ್ಣ ರವರಿಗೆ ಹಾಗೂ ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ರವರಿಗೆ ನಾಗರೀಕರ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ.
– ವಿಷ್ಣುವರ್ಧನ, ನಿಕಟಪೂರ್ವ ವಿರೋಧ ಪಕ್ಷದ ನಾಯಕರು, ವಾರ್ಡ್-30, ಮಹಾನಗರಪಾಲಿಕೆ.