ಆನೇಕಲ್: ಮಹಿಳೆ ತನ್ನ ಪತಿಯ ಮೊಬೈಲ್ನಿಂದ ಹುಸಿ ಬಾಂಬ್ ಸ್ಪೋಟದ ಮೆಸೇಜ್ ಕಳುಹಿಸಿ ಕೊನೆಗೆ ಸಿಕ್ಕಿಬಿದ್ದಿರುವ ಘಟನೆ ಆನೇಕಲ್ನಲ್ಲಿ ನಡೆದಿದೆ.
ಆನೇಕಲ್ ಪಟ್ಟಣದ ಮಾರುತಿ ಬಡಾವಣೆಯಲ್ಲಿ ಉತ್ತರ ಕರ್ನಾಟಕ ಮೂಲದ ಕಿರಣ್ ಮತ್ತು ವಿದ್ಯಾರಾಣಿ ಎಂಬ ದಂಪತಿ ವಾಸವಿದ್ದರು. ಮೊಬೈಲ್ ಆಯಪ್ ಒಂದರ ಮೂಲಕ ವಿದ್ಯಾರಾಣಿಗೆ ವ್ಯಕ್ತಿಯೊಬ್ಬನ ಪರಿಚಯವಾಗಿತ್ತು. ಈ ವಿಚಾರ ಕೆಲ ದಿನಗಳ ಹಿಂದೆ ಗಂಡ ಕಿರಣ್ಗೆ ಗೊತ್ತಾಗಿದೆ. ಈ ವಿಚಾರ ದಂಪತಿಗಳ ಮಧ್ಯೆ ಗಲಾಟೆಗೆ ಕಾರಣವಾಗಿತ್ತು. ಪರಿಣಾಮ ಪತ್ನಿಯ ಮೊಬೈಲ್ನ್ನು ಕಿರಣ್ ಒಡೆದು ಹಾಕಿದ್ದ.
ಈ ಸಂಗತಿಯನ್ನು ಬೇರೆ ನಂಬರ್ ಮೂಲಕ ವಿದ್ಯಾರಾಣಿ ತನ್ನ ಸ್ನೇಹಿತನಿಗೆ ತಿಳಿಸಿದ್ದಳು. ಬಳಿಕ ಕಿರಣ್ರನ್ನು ಸಿಲುಕಿಸುವ ಸಂಚು ರೂಪಿಸಿದ್ದರು. ಇದಕ್ಕಾಗಿ ವಿದ್ಯಾರಾಣಿಯ ಸ್ನೇಹಿತ ಹಾಗೂ ಆತನ ಸ್ನೇಹಿತರು ವಿದ್ಯಾರಾಣಿಗೆ ಕೆಲವು ಸಂದೇಶಗಳನ್ನು ಕಳುಹಿಸುತ್ತಿದ್ದರು. ಕಳುಹಿಸಿದ ಈ ಮೆಸೇಜ್ಗಳನ್ನು ವಿದ್ಯಾರಾಣಿ ತನ್ನ ಗಂಡನ ಮೊಬೈಲ್ಗೆ ಕಳುಹಿಸಿಕೊಂಡಿದ್ದಾಳೆ. ಬಳಿಕ ಆ ಮೊಬೈಲ್ನಿಂದಲೇ ‘ಡಿಸೆಂಬರ್ 5ರಂದು ಆರ್ಡಿಎಕ್ಸ್ ಬಾಂಬ್’ ಸ್ಪೋಟಿಸುವ ಬೆದರಿಕೆ ಮೆಸೇಜ್ಗಳನ್ನು ಪೊಲೀಸ್ ಹಾಗು ಕೇಂದ್ರ ತನಿಖಾ ತಂಡಗಳಿಗೆ ಖುದ್ದು ಕಳುಹಿಸಿದ್ದಳು.
ಪೊಲೀಸರು ಮತ್ತು ತನಿಖಾ ಸಂಸ್ಥೆಗಳು ಮೆಸೇಜ್ ಬಂದಿದ್ದ ಫೋನ್ ನಂಬರ್ ಮೂಲ ಹುಡುಕಿಕೊಂಡು ಹೊರಟಿದ್ದಾರೆ. ಮಾಹಿತಿ ದೊರಕಿದಂತೆ ಸೀದಾ ಕಿರಣ್ ಮನೆಗೆ ಬಂದು ಪೊಲೀಸರು ದಂಪತಿಯನ್ನು ವಿಚಾರಣೆಗೊಳಪಡಿಸಿದ್ದು, ಆಗ ಸತ್ಯ ಬಯಲಾಗಿದೆ. ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.