Friday, 13th December 2024

ಪೋಷಕರು ಮಕ್ಕಳಿಗೆ ಸಮಯ ನೀಡಬೇಕು: ಆಯುಕ್ತೆ 

ತುಮಕೂರು: ಪೋಷಕರು ಕೆಲಸದ ಒತ್ತಡದ ನಡುವೆಯೂ ಮಗುವಿಗೆ ಸಮಯ ಮೀಸಲಿಡಬೇಕೆಂದು ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಸಲಹೆ ನೀಡಿದರು.
ಪ್ರೆಸ್‌ಕ್ಲಬ್ ತುಮಕೂರು ಆವರಣ ಆಲದ ಮರ ಪಾರ್ಕ್ ನಲ್ಲಿ ಪ್ರೆಸ್‌ಕ್ಲಬ್ ಹಾಗೂ ಆರ್ಟ್ ಯೂನಿವರ್ಸ್ ಸಹಯೋಗದಲ್ಲಿ ಹೊಸ ವರ್ಷದ ಆಗಮನಕ್ಕೆ ಮಕ್ಕಳು, ಪೋಷಕರಿಗೆ ಏರ್ಪಡಿಸಿದ್ದ ಆಟೋಟದಲ್ಲಿ ಮಾತನಾಡಿ, ಮಕ್ಕಳನ್ನು ಪ್ರಕೃತಿಯೊಂದಿಗೆ ಬೆರೆಯಲು ಬಿಡಬೇಕು. ಮಣ್ಣಿನಲ್ಲಿ ಮುಕ್ತವಾಗಿ ಆಡಲು ಅವಕಾಶ ನೀಡಬೇಕು ಎಂದರು.
ಮುಖಂಡ ಎಸ್.ಪಿ.ಚಿದಾನಂದ ಮಾತನಾಡಿ, ಮಕ್ಕಳ ಕೌಶಲ್ಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗೆ ಒತ್ತು ನೀಡಿ ದಾಗ ಮಾತ್ರ ಮಗುವಿನ ಸರ್ವಾಂಗೀಣ ಬೆಳವಣಿಗೆ ಸಾಧ್ಯ. ಕಲ್ಪತರು ನಾಡಿನ ರೈತರಿಗೆ ವರದಾನವಾಗುವಂತೆ ಹೆಚ್ಚು ತೆಂಗಿನ ಎಣ್ಣೆ, ಉತ್ಪನ್ನ ಗಳನ್ನು ಬಳಸುವುದನ್ನು ೨೦೨೪ರ ಸಂಕಲ್ಪವನ್ನಾಗಿಸಿಕೊಳ್ಳೋಣ ಎಂದರು.
ಪ್ರೆಸ್‌ಕ್ಲಬ್ ಅಧ್ಯಕ್ಷ ಶಶಿಧರ್ ಎಸ್.ದೋಣಿಹಕ್ಲು ಮಾತನಾಡಿ, ಮಕ್ಕಳನ್ನು ಮೊಬೈಲ್‌ನಿಂದ ದೂರವಿಡದಿದ್ದರೆ ಭವಿಷ್ಯದಲ್ಲಿ ಬಹಳ ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇಂದಿನ ಮಕ್ಕಳೆ ನಾಳಿನ ಪ್ರಜೆಗಳು. ಮಕ್ಕಳು ಮಾನಸಿಕ, ದೈಹಿಕವಾಗಿ ಸದೃಢವಾಗದಿದ್ದರೆ, ಯಂತ್ರದ ರೀತಿಯಲ್ಲಿ ಉಳಿದರೆ ಕಷ್ಟ. ಮಕ್ಕಳು ಎಲ್ಲರೊಂದಿಗೆ ಬೆರೆಯುವ, ಹೊಸ ಆಲೋಚನೆ ಮಾಡುವ ಮತ್ತು ಕಾರ್ಯಗತಗೊಳಿಸುವಂತವರಾಗಬೇಕು ಎಂದರು.
 ಕಾರ್ಯಕ್ರಮದಲ್ಲಿ ಲೋಟಕ್ಕೆ ಚೆಂಡು ಎಸೆಯುವುದು, ಕಾಲಿಗೆ ಚೀಲ ಕಟ್ಟಿ ಕೊಂಡು ಓಡುವುದು, ಚೆಂಡಾಟ ಹೀಗೆ ನಾನಾ ಆಟಗಳನ್ನು ಆಡಿಸಲಾ ಯಿತು. ಮಕ್ಕಳು, ಪೋಷಕರು ಆಟದಲ್ಲಿ ಪಾಲ್ಗೊಂಡು ಉದ್ದೇಶವನ್ನು ಸಾರ್ಥಕಗೊಳಿಸಿದರು. ಆರ್ಟ್ ಯೂನಿವರ್ಸ್ ಎಚ್.ಎನ್. ಚಿದಾನಂದ, ಜಿ.ಆರ್.ಸೂರ್ತಿ, ಸುಮಾ ಉಮೇಶ್, ಸಿಂಧೂರ ಬೆಳ್ಳಾವಿ, ರೈತಸೂರ್ತಿ ಸಿಇಒ ಸಂಜೀವ್ ಮತ್ತಿತರರಿದ್ದರು.