Sunday, 15th December 2024

ತಿಪಟೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಕೆ

ತಿಪಟೂರು : ಕಾಂಗ್ರೆಸ್ ಪಕ್ಷದಲ್ಲಿ ಎಲ್ಲಾ ಮುಖಂಡರಿಗೂ ವಿಧಾನಸಭಾ ಚುನಾವಣೆಯ ಟಿಕೆಟ್ ಪಡೆಯಲು ಅವಕಾಶ ಕಲ್ಪಿಸಿದ್ದು ಬೆಂಬಲಿಗರ ಒತ್ತಾಯದ ಮೇರೆಗೆ ತಿಪಟೂರು ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸುತ್ತಿರುವುದಾಗಿ ಕಾಂಗ್ರೆಸ್ ಮುಖಂಡ ಲೋಕೇಶ್ವರ ತಿಳಿಸಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು ಕಲೆದ ಹಲವಾರು ವರ್ಷಗಳಿಂದಲೂ ಸಮಾಜ ಸೇವೆಯನ್ನು ಮಾಡುತ್ತಾ ಬಂದಿದ್ದು ತಿಪಟೂರು ವಿಧಾನಸಭಾ ಕ್ಷೇತ್ರದ ಸಂಪೂರ್ಣ ಮಾಹಿತಿ ಇದೆ. ತಾಲ್ಲೂಕಿನಾದ್ಯಂತ ಇರುವಂತಹ ಎಲ್ಲಾ ಸಮಸ್ಯೆಗಳ ವಿರುದ್ಧ ಧನಿ ಎತ್ತಿದ್ದು ಅವಕಾಶ ಸಿಕ್ಕರೆ ಜನರ ಸೇವೆ ಸಲ್ಲಿಸಲು ಅನುಕೂಲವಾಗಲಿದೆ.

ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರಿಗೂ ಮುಕ್ತ ಅವಕಾಶವನ್ನು ಕಲ್ಪಿಸಿದ್ದು ದೆಹಲಿಯಿಂದ ಹಳ್ಳಿಯವರೆವಿಗೂ ಎಲ್ಲರ ಬೆಂಬಲ ಇರುವುದರಿಂದ ಕೆಪಿಸಿಸಿಗೆ ತಿಪಟೂರು ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಲಾಗುವುದು. ಒಂದು ವೇಳೆ ಟಿಕೆಟ್ ಸಿಗದಿದ್ದರೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರನಾಗಿ ಸೇವೆ ಸಲ್ಲಿಸಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ. ಈಗಾಗಲೇ ನಮ್ಮ ಬೆಂಬಲಿಗರೂ ಒತ್ತಾಯ ಮಾಡಿದ್ದು ಅವರಿಗೂ ಸಮಾಧಾನ ಪಡಿಸಿದ್ದು ಕಾಂಗ್ರೆಸ್ ಪಕ್ಷದ ಟಿಕೆಟ್ ಸಿಕ್ಕವರಿಗೆ ಬೆಂಬಲ ಸೂಚಿಸಲಾಗು ವುದು.

ಬೇರೆ ಪಕ್ಷಗಳಿಂದ ಬುಲಾವ್ : ತಿಪಟೂರು ವಿಧಾನಸಭಾ ಕ್ಷೇತ್ರಕ್ಕೆ ಇತರೆ ಪಕ್ಷಗಳು ಅಭ್ಯರ್ಥಿಯ ಹುಡುಕಾಟದಲ್ಲಿ ಇದ್ದು, ಅನೇಕರು ಸಂಪರ್ಕಿಸಿರುವುದು ಸತ್ಯದ ಸಂಗತಿ. ಆದರೆ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬೇರೆ ಯಾವುದೇ ಪಕ್ಷಕ್ಕೂ ಸೇರ್ಪಡೆ ಆಗುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ನಗರಸಭೆಯ ಉಪಾಧ್ಯಕ್ಷ ಸೊಪ್ಪು ಗಣೇಶ್, ಸದಸ್ಯರುಗಳಾದ ಯಮುನಾ ಧರಣೀಶ್, ಭಾರತಿ ಮಂಜುನಾಥ್, ಆಶ್ರಿಫಾ ಬಾನು, ರಾಜಶೇಖರ್, ನಾಗರಾಜು ಸೇರಿದಂತೆ ಹಲವರು ಇದ್ದರು.