Thursday, 12th December 2024

ಟ್ರಾನ್ಸಫಾರ್ಮರ್‌ ದುರಸ್ತಿ ಕೇಂದ್ರದಲ್ಲಿ ಬೆಂಕಿ

ಬೀದರ್‌: ನಗರದ ಜ್ಯೋತಿ ಕಾಲೊನಿಯ ಜೆಸ್ಕಾಂ ಕಚೇರಿಯ ಆವರಣದಲ್ಲಿರುವ ಟ್ರಾನ್ಸಫಾರ್ಮರ್‌ ದುರಸ್ತಿ ಕೇಂದ್ರದಲ್ಲಿ ಭಾನುವಾರ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಧಗಧಗನೆ ಉರಿದ ಪರಿಣಾಮ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.

ಸಾರ್ವಜನಿಕ ಸ್ಥಳಗಳು, ರೈತರ ಗದ್ದೆಗಳಲ್ಲಿ ಕೆಟ್ಟು ಹೋದ ಟ್ರಾನ್ಸಫಾರ್ಮರ್‌ಗಳನ್ನು ಕೇಂದ್ರದಲ್ಲಿ ದುರಸ್ತಿ ಮಾಡಲಾಗುತ್ತದೆ.

ಭಾನುವಾರ ಬೆಳಿಗ್ಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಸುಮಾರು 50ಕ್ಕೂ ಹೆಚ್ಚು ಟ್ರಾನ್ಸಫಾರ್ಮರ್‌ಗಳು, ಅಪಾರ ಪ್ರಮಾಣದ ಡೀಸೆಲ್‌, ವಿದ್ಯುತ್‌ ತಂತಿಗಳು ಸಂಪೂರ್ಣ ಸುಟ್ಟು ಹೋಗಿವೆ. ಆರು ಜನ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹಳೆಯ ಜೀಪೊಂದು ಬೆಂಕಿಗೆ ಸಂಪೂರ್ಣ ಸುಟ್ಟು ಹೋಗಿದೆ. ಅಪಾರ ಪ್ರಮಾಣದ ಬೆಂಕಿ, ದಟ್ಟ ಹೊಗೆ ಆವರಿಸಿಕೊಂಡಿದ್ದರಿಂದ ಸುತ್ತಮುತ್ತಲಿನ ಜನ ಅಲ್ಲಿಗೆ ದೌಡಾಯಿಸಿದರು.

ಘಟನೆಗೆ ಶಾರ್ಟ್‌ ಸರ್ಕ್ಯೂಟ್‌ ಕಾರಣವಿರಬಹುದು ಎಂದು ಜೆಸ್ಕಾಂ ಸಿಬ್ಬಂದಿ ತಿಳಿಸಿದ್ದಾರೆ. ಆದರೆ, ಅಧಿಕಾರಿಗಳ ಪ್ರಕಾರ, ಇನ್ನಷ್ಟೇ ನಿಖರ ಮಾಹಿತಿ ಗೊತ್ತಾಗಬೇಕಿದೆ. ಬೆಂಕಿ ಹೊತ್ತಿಕೊಂಡ ವಿಷಯ ತಿಳಿದು ಅಗ್ನಿಶಾಮಕ ದಳ, ವಾಯುಸೇನೆಯ ಅಗ್ನಿನಂದಕ ವಾಹನಗಳು ಸ್ಥಳಕ್ಕಾಗಮಿಸಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಹರಸಾಹಸ ನಡೆಸಿ ಬೆಂಕಿಯನ್ನು ನಂದಿಸಿದರು.