Friday, 20th September 2024

ನಾಮಫಲಕಗಳಲ್ಲಿ ತುಳು ಭಾಷೆ ಲಿಪಿ ಅಳವಡಿಕೆ: ವಿಶೇಷ ಆದೇಶ ಹೊರಡಿಸುವಂತೆ ಆಗ್ರಹ

ಉಡುಪಿ: ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ಕರ್ನಾಟಕ ಸರ್ಕಾರದ ಗೌರವಾನ್ವಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತುಳು ಭಾಷೆ ಲಿಪಿಯ ಅಕ್ಷರಗಳನ್ನು ಸಹ ಸಾರ್ವಜನಿಕ ಪ್ರದೇಶದಲ್ಲಿ ಹಾಗೂ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಅಳವಡಿಸಲು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ವಿಶೇಷ ಆದೇಶ ಹೊರಡಿಸುವಂತೆ ಆಗ್ರಹಿಸಿ ಮಾಜಿ ಶಾಸಕ ಮೊಯಿದೀನ್ ಬಾವ ಅವರ ಹಾಗೂ ಎಲ್ಲಾ ತುಳು ಪರ ಸಂಘಟನೆಗಳ ನೇತೃತ್ವದಲ್ಲಿ ತುಳುನಾಡಿನ ಜನರ ಪರವಾಗಿ ಮನವಿ ನೀಡಲಾಯಿತು.

ಉಡುಪಿ ಜಿಲ್ಲೆಯ ಗೌರವಾನ್ವಿತ ಜಿಲ್ಲಾಧಿಕಾರಿಗಳು ಮನವಿಯನ್ನು ಸ್ವೀಕರಿಸಿದರು. ಬಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ಮಸೂದೆ 2024 ರಲ್ಲಿ ತಿಳಿಸಿರು ವಂತೆ ಕನ್ನಡ ಭಾಷೆಯನ್ನು ಶೇ.60ರ ಬದಲಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಗೌರವಾನ್ವಿತ ನ್ಯಾಯಾಲಯದ ಕನ್ನಡ ನಾಮಫಲಕ ಗಳಿಗೆ ಕನಿಷ್ಠ ಶೇ.50 ನ್ನು ನಮೂದಿಸಿ ಹಾಗೂ 2500 ವರ್ಷಗಳ ಇತಿಹಾಸ ಹೊಂದಿರುವ ಸ್ವಂತ ಲಿಪಿ ಹೊಂದಿರುವ ತುಳು ಲಿಪಿಯ ಅಕ್ಷರಗಳಿಗೆ ಶೇ.30 ರಷ್ಟು ಅವಕಾಶ ನೀಡಬೇಕು ಮತ್ತು ಉಳಿದ ವ್ಯಾವ ಹಾರಿಕ ಭಾಷೆಗಳಿಗೆ ಶೇ.20 ರಷ್ಟನ್ನು ತುಳುನಾಡಿನ 2 ಜಿಲ್ಲೆಗಳಿಗೆ ಅನ್ವಯವಾಗುವಂತೆ ಕೂಡಲೇ ವಿಶೇಷ ಆದೇಶ ಹೊರಡಿಸಬೇಕೆಂದು ಆಗ್ರಹಿಸಲಾ ಯಿತು.

ಈ ಸಂದರ್ಭದಲ್ಲಿ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯರಾದ ಶ್ರೀ ಆಕಾಶ್ ರಾಜ್ ಜೈನ್ ಅವರು, ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷರಾದ ಶ್ರೀ ಯೋಗೀಶ್ ಶೆಟ್ಟಿ ಜೆಪ್ಪು ಅವರು, ತುಳು ಪರ ಹೋರಾಟಗಾರರಾದ ರೋಷನ್ ರೆನೋಲ್ಡ್, ಜೈ ತುಳುನಾಡು ಸಂಘಟನೆ ಅಧ್ಯಕ್ಷರಾದ ವಿಷು ಶ್ರೀಕೆರಾ, ತುಳುನಾಡು ಒಕ್ಕೂಟದ ಪ್ರಮುಖ ಮುಖಂಡರುಗಳು, ಉಡುಪಿ ರಾಜಕೀಯ ಮುಖಂಡರಾದ ಕೃಷ್ಣಮೂರ್ತಿ ಆಚಾರ್ಯ ಅವರು, ಸೇರಿದಂತೆ ಎಲ್ಲಾ ತುಳು ಪರ ಸಂಘಟನೆಗಳ ಪದಾಧಿಕಾರಿಗಳು ಸದಸ್ಯರುಗಳು ಉಪಸ್ಥಿತರಿದ್ದರು.