ಮಧುಗಿರಿ: ಭಾರತದ ಸಂವಿಧಾನ ಪ್ರಪಂಚದಲ್ಲಿಯೇ ಶ್ರೇಷ್ಠ ಹಾಗೂ ಅತಿ ದೊಡ್ಡದಾದ ಗ್ರಂಥವಾಗಿದೆ ಎಂದು ಡಿ.ವಿ. ಹಳ್ಳಿ ಗ್ರಾ.ಪಂ ಅಧ್ಯಕ್ಷ ಬಾಣದ ರಂಗಯ್ಯ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿ ಡಿ.ವಿ. ಹಳ್ಳಿ ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ನಮ್ಮ ದೇಶ, ನಮ್ಮ ಸಂವಿಧಾನ ಎಂಬ ವಿನೂತನ ಕಾರ್ಯಕ್ರಮದಲ್ಲಿ ಪಂಚಾಯಿತಿ ವ್ಯಾಪ್ತಿಯ ಎಲ್ಲ ಶಾಲೆಗಳಿಗೆ ಸಂವಿಧಾನದ ಪೀಠಿಕೆಯ ಹೊತ್ತಿಗೆಯನ್ನು ನೀಡಿ ಮಾತನಾಡಿದ ಅವರು ಬ್ರೀಟಿಷರು ನಮ್ಮ ದೇಶಕ್ಕೆ ಬಂದು ಸುಮಾರು ೩೦೦ ವರ್ಷಗಳ ಕಾಲ ನಮ್ಮನ್ನಾಳಿ ದೇಶದ ಸಂಪತ್ತನ್ನು ಕೊಳ್ಳೆ ಹೊಡೆದು ಅವರು ದೇಶ ಬಿಟ್ಟು ಹೋಗಬೇಕಾದರೆ ನಮ್ಮಲ್ಲಿ ಏನೂ ಉಳಿದಿರಲ್ಲಿಲ್ಲ.
ಜನರಿಗೆ ತಿನ್ನುವುದಕ್ಕೆ ಅನ್ನವೂ ಇಲ್ಲದೆ ಎಲ್ಲೆಡೆ ಬಡತನವೊಂದೆ ತಾಂಡವಾಡುತ್ತಿತ್ತು. ಅಂತಹ ಸಂದರ್ಭದಲ್ಲಿ ರಾಷ್ಟ್ರಕ್ಕೊಂದು ಸಂವಿಧಾನಬೇಕೆAದು ಅರಿತ ಹಲವು ಸ್ವಾತಂತ್ರ‍್ಯ ಹೋರಾಟಗಾರರು ಸಂವಿಧಾನ ರಚಿಸಲು ಮುಂದಾಗುತ್ತಾರೆ. ಆಗ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಬಾಬು ರಾಜೇಂದ್ರ ಪ್ರಸಾದ್ ಅವರನ್ನು ಹಾಗೂ ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ನೇಮಕ ಮಾಡಲಾಗುತ್ತದೆ. ನಂತರದ ದಿನಗಳಲ್ಲಿ ಅಂಬೇಡ್ಕರ್ ಹೆಚ್ಚು ಶ್ರಮವಹಿಸಿ ಹಲವು ದೇಶಗಳ ಸಂವಿಧಾನಗಳನ್ನು ಮಾದರಿಯಾಗಿಸಿಕೊಂಡು ಭಾರತದ ಸಾಮಾಜಿಕ ಪರಿಸ್ಥಿತಿಗೆ ಹೊಂದುವ ಸಂವಿಧಾನವನ್ನು ರಚಿಸಿ ದೇಶಕ್ಕೆ ಅರ್ಪಿಸಿದ್ದಾರೆ.
ಪ್ರತಿಯೊಬ್ಬರೂ ಸಂವಿಧಾನವನ್ನು ತಿಳಿದುಕೊಳ್ಳಬೇಕಾಗಿದೆ. ಮಕ್ಕಳಲ್ಲಿ ಚಿಕ್ಕಂದಿನಿ0ದಲೇ ಸಂವಿಧಾನದ ಬಗ್ಗೆ ಆಸಕ್ತಿ ಮೂಡಿಸಲು ನಮ್ಮ ದೇಶ, ನಮ್ಮ ಸಂವಿಧಾನ ಎಂಬ ಕಾರ್ಯಕ್ರಮ ರೂಪಿಸಿ ನಮ್ಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಶಾಲೆಗಳಿಗೆ ಸಂವಿಧಾನದ ಪೀಠಿಕೆಯ ಹೊತ್ತಿಗೆಯನ್ನು ನೀಡಲಾಗುತ್ತದೆ ಎಂದರು.
ಮು0ದಿನ ದಿನಗಳಲ್ಲಿ ಮೂಲಭೂತ ಕರ್ತವ್ಯಗಳು, ಮೂಲಭೂತ ಹಕ್ಕುಗಳ ಪಟ್ಟಿಯ ಹೊತ್ತಿಗೆಯನ್ನು ಶಾಲಾ ಮಕ್ಕಳಿಗೆ ವಿತರಿಸುವ ಉದ್ದೇಶವಿದ್ದು.
ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿ, ದಲಿತರಿಗೆ, ಆರ್ಥಿಕವಾಗಿ ಹಿಂದುಳಿದ ಬಡ ಮಕ್ಕಳಿಗೆ ಪಂಚಾಯ್ತಿಯ ಅನುಧಾನದಲ್ಲಿ ಎಷ್ಟು ಸಾಧ್ಯವೋ ಅಷ್ಟು ಅನುಕೂಲ ಮಾಡಿಕೊಡಲಾಗುವುದು ಹಾಗೂ ನಮ್ಮ ಗ್ರಾಮ, ನಮ್ಮ ಸ್ವಚ್ಛತೆ, ನಮ್ಮ ಕಾನೂನು ಎಂಬ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾಮಾನ್ಯ ಜನರಲ್ಲಿ ಅರಿವು ಮೂಡಿಸಲಾಗುತ್ತದೆ ಎಂದು ತಿಳಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ್ ಎಂ.ಎನ್. ಮಾತನಾಡಿ, ಅಧ್ಯಕ್ಷರು, ಸದಸ್ಯರು ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದು, ಪಂಚಾಯಿತಿ ವ್ಯಾಪ್ತಿಯ ಎಲ್ಲ ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರಗಳಿಗೆ ಆದ್ಯತೆ ಮೇರೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಂಚಾಯಿತಿ ಹಿಂಭಾಗದಲ್ಲಿರುವ ಉದ್ಯಾನ ವನದಲ್ಲಿ ಹಲವು ಸಸಿಗಳನ್ನು ನಾಟಿ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗ್ರಾ. ಪಂ. ಉಪಾಧ್ಯಕ್ಷೆ ಮಂಜುಳಾ ತಿಮ್ಮರಾಜು, ಸದಸ್ಯರಾದ ಗಂಗಮ್ಮ, ಮಂಜುಳಾ, ಶಿಕ್ಷಕಿಯರಾದ ಜಯಮ್ಮ, ಮುತ್ತುರಾಜ್, ರಂಗನಾಥ, ರಾಮಚಂದ್ರಯ್ಯ, ಹರೀಶ್, ಪಂಚಾಯಿತಿ ಕಾರ್ಯದರ್ಶಿ ನವೀನ್, ಅಶಾ ಕಾರ್ಯಕರ್ತರಾದ ಪುಷ್ಪಾಲತಾ, ಪೂಜಿತಾ ಮತ್ತಿತರರು ಉಪಸ್ಥಿತರಿದ್ದರು.