Sunday, 15th December 2024

ಒಂಭತ್ತು ವರ್ಷದಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ: ಸಂಸದ ಜಿ.ಎಸ್.ಬಸವರಾಜು

ತುಮಕೂರು: ಪ್ರಧಾನಿಮಂತ್ರಿಯಾಗಿ ನರೇಂದ್ರಮೋದಿ ಜೂ.3ಕ್ಕೆ ಒಂಭತ್ತು ವರ್ಷ ಪೂರೈಸಿದ್ದು,ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮೇಘಾ ಪುಡ್‌ ಪಾರ್ಕು, ಎಚ್.ಎ.ಎಲ್, ಇಸ್ರೋ ಸೇರಿದಂತೆ ಹಲವಾರು ಮಹತ್ವದ ಕೆಲಸಗಳು ಆಗಿವೆ ಎಂದು ಸಂಸದ ಜಿ.ಎಸ್.ಬಸವರಾಜು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೀರಾವರಿ,ಕೃಷಿ,ತೋಟಗಾರಿಕೆ,ಕೈಗಾರಿಕೆ ಸೇರಿದಂತೆ ಎಲ್ಲಾ ವಿಧದಲ್ಲಿಯೂ ಜಿಲ್ಲೆ ಅಭಿವೃದ್ದಿ ಕಂಡಿದೆ ಎಂದರು. ಆರ್ಥಿಕ ತಜ್ಞ ನಂಜುಂಡಪ್ಪ ವರದಿ ಅನ್ವಯ ತುಮಕೂರು ಜಿಲ್ಲೆಯ 8 ತಾಲೂಕುಗಳು ಅತಿ ಹಿಂದುಳಿದ ತಾಲೂಕುಗಳಾಗಿದ್ದವು. ಆದರೆ ಕಳೆದ 9 ವರ್ಷಗಳಲ್ಲಿ ಮೋದಿಯ ದೂರದೃಷ್ಟಿ ಯೋಜನೆಗಳ ಫಲವಾಗಿ ಇಂದು ಎಲ್ಲಾ ತಾಲೂಕುಗಳು ಮುಂದುವರೆದಿವೆ.ಮಿಷನ್ ಅಮೃತ ಸರೋವರ,ಅಟಲ ಭೂ ಜಲ ಯೋಜನೆಯ ಮೂಲಕ ಕೆರೆಗಳಲ್ಲಿದ್ದ ಹೂಳು ಎತ್ತಿ, ಎಲ್ಲಾ ಕೆರೆಗಳಿಗೆ ಅಂತರಜಲ ವೃದ್ದಿಯಾಗುವಂತೆ ಮಾಡಲಾಗಿದೆ. ಇದರ ಜೊತೆಗೆ ಭದ್ರ ಮೇಲ್ದಂಡೆ ಯೋಜನೆಗೆ 5000 ಕ್ಕೂ ಹೆಚ್ಚು ಕೋಟಿ ಅನುದಾನ ನೀಡಲಾಗಿದೆ. ಇದರ ಭಾಗವಾಗಿ ಜಿಲ್ಲೆಯಲ್ಲಿ ಜಲ ಸಂವೃದ್ದಿ ಹೆಚ್ಚಾಗಿ, ರೈತರು ಕೃಷಿ ಮಾಡಿ, ಸಮೃದ್ದಿಯ ಜೀವನ ನಡೆಸುತಿದ್ದಾರೆ ಎಂದರು.
ತುಮಕೂರು-ದಾವಣಗೆರೆ, ತುಮಕೂರು –ರಾಯದುರ್ಗ ರೈಲ್ವೆ ಲೈನ್‌ಗಳ ಜೊತೆಗೆ,ತುಮಕೂರು, ಕುಣಿಗಲ್, ಮದ್ದೂರು, ಚಾಮರಾಜನಗರ ಹೊಸ ರೈಲು ಮಾರ್ಗದ ಸರ್ವೆ ಕಾರ್ಯಸಹ ನಡೆದಿದೆ.ಚಳ್ಳಕೆರೆ, ಹಿರಿಯೂರು, ಚಿ.ನಾ.ಹಳ್ಳಿ, ತುರುವೇಕೆರೆ, ಚನ್ನರಾಯ ಪಟ್ಟಣ ಹೊಸ ರೈಲು ಮಾರ್ಗಕ್ಕೆ ಒಪ್ಪಿಗೆ ದೊರೆತಿದೆ.ತುಮಕೂರು ಜಿಲ್ಲೆಗೆ ಜಲಜೀವನ್ ಮೀಷನ್ ಯೋಜನೆ, 100 ಹಾಸಿಗೆಗಳ ಇ.ಎಸ್.ಐ ಆಸ್ಪತ್ರೆಯ ಮಂಜೂರಾತಿ,ಈ ಎಲ್ಲಾ ಯೋಜನೆಗಳ ಹಿಂದೆ ಪ್ರಧಾನಿ ನರೇಂದ್ರಮೋದಿ ಅವರ ಸಹಕಾರವಿದೆ ಎಂದರು.
ರಾಜ್ಯದ ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳಿಂದ ಜನಸಾಮಾನ್ಯರಿಗೆ ಯಾವುದೇ ಉಪಯೋಗವಾಗದು. ಇದು ಕೇವಲ ಕಣೋರೆಸೋ ತಂತ್ರ.ಇದರಿಂದ ಅರ್ಥಿಕ ಹೊರೆ ಹೆಚ್ಚಾಗಲಿದೆ. ಕೆಲಸಕ್ಕೆ ಜನರಿಲ್ಲದಂತಾಗುತ್ತದೆ. ನಿರುದ್ಯೋಗ ಭತ್ಯೆಯಿಂದ ಯುವಜನರಿಗೆ ಉದ್ಯೋಗ ಹುಡುಕುವ ಕಾತುರತೆ ಇಲ್ಲದಂತಾಗಿದೆ.ಹಣಕ್ಕಾಗಿ ಯಾರ ತಲೆ ಬೋಳಿಸುತ್ತಾರೆ ನೋಡಬೇಕಿದೆ ಎಂದು ಸಂಸದ ಜಿ.ಎಸ್.ಬಸವರಾಜು ವ್ಯಂಗವಾಡಿದರು.
ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಮುಂದಿನ ಬಾರಿ ಸೋಮಣ್ಣ ಅಭ್ಯರ್ಥಿಯಾಗುತ್ತಾರೆ ಎಂದು ಹೇಳಿಲ್ಲ.ಪತ್ರಿಕೆಯೊಂದರಲ್ಲಿ ಬಂದ ವರದಿಯನ್ನಷ್ಟೇ ಉಲ್ಲೇಖಿಸಿದ್ದೇನೆ.ನನ್ನ ನಂತರ ಯಾರು ಎಂದು ಹೇಳುವ ಹಕ್ಕು ನನಗಿಲ್ಲ. ಅದು ಪಕ್ಷದ ಹೈಕಮಾಂಡ್ ತೀರ್ಮಾನ. ನನ್ನ ಅಭಿಪ್ರಾಯ ಕೇಳಿದರೆ  ಮುಂದಿನ ಎಂಪಿ ಅಭ್ಯರ್ಥಿ ವಿ.ಎಸ್.ಸೋಮಣ್ಣ ಎಂದು ಸ್ಪಷ್ಟನೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಚ್.ಎಸ್.ರವಿಶಂಕರ್,ಮುಖಂಡರಾದ ಎಸ್.ಪಿ.ಚಿದಾನಂದ್, ಮಾಧ್ಯಮ ಪ್ರಮುಖ ಟಿ.ಆರ್.ಸದಾಶಿವಯ್ಯ, ಸಹ ಪ್ರಮುಖ ಜಗದೀಶ್ ಉಪಸ್ಥಿತರಿದ್ದರು.