Saturday, 14th December 2024

ಡೀಸೆಲ್ ಹೊತ್ತೊಯ್ಯುತ್ತಿದ್ದ ಲಾರಿ ಪಲ್ಟಿ

ತಿಪಟೂರು: ತಾಲೂಕಿನ  ಹಾಲ್ಕುರಿಕೆ ರಸ್ತೆಯ ಹರಿಸಮುದ್ರ ಗೇಟ್ ಬಳಿ ಡೀಸೆಲ್ ಹೊತ್ತೊಯ್ಯುತ್ತಿದ್ದ ಲಾರಿ ಪಲ್ಟಿ, ಡೀಸೆಲ್ ತುಂಬಿಕೊಳ್ಳಲು ಮುಂದಾದ ಅಕ್ಕ ಪಕ್ಕದ ಗ್ರಾಮಸ್ಥರು. ಹಾಸನದಿಂದ ಚಿತ್ರದುರ್ಗಕ್ಕೆ ಅತಿ ವೇಗದಲ್ಲಿ ಚಲಿಸುತ್ತಿದ್ದ ಡೀಸೆಲ್  ಟ್ಯಾಂಕರ್ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಹಿಂಭಾಗ ದಲ್ಲಿ ಕುಳಿತಿದ್ದ ಭೈರನಾಯಕನಹಳ್ಳಿ ಮೂಲದ ಗೃಹಿಣಿ ಸರ್ವಮಂಗಳ(47) ಎಂಬುವರಿಗೆ ತೀವ್ರ ಪೆಟ್ಟಾಗಿದೆ.

ಗೃಹಿಣಿ ಸರ್ವಮಂಗಳ ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗಿದ್ದು, ಗೃಹಲಕ್ಷ್ಮಿ ಯೋಜನೆಯ ಫಲ ಸಿಗದ ಕಾರಣ ಹೊನ್ನವಳ್ಳಿಯ ನಾಡಕಚೇರಿಯಲ್ಲಿ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಿ ಹಿಂದಿರುಗು ವಾಗ ಹರಿಸಮುದ್ರ ಗೇಟ್ ನ ಬಳಿ ಯಮಸ್ವರೂಪಿ ಟ್ಯಾಂಕರ್ ಲಾರಿಯು ಡಿಕ್ಕಿ ಹೊಡೆದಿದೆ.

ಅಪಘಾತಕ್ಕೊಳದ ಮಹಿಳೆಗೆ ತೀವ್ರ ಪೆಟ್ಟಾಗಿದ್ದು ತಿಪಟೂರು ವೈದ್ಯರ ಸಲಹೆ ಮೇರೆಗೆ ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿತ್ತ.

ಚಿಕಿತ್ಸೆಗೆ ಸ್ಪಂದಿಸದ ಮಹಿಳೆ ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಟ್ಯಾಂಕರ್ ಲಾರಿ ನಂಬರ್ ಕೆ.ಎ.51 ಎಎಪ್.8054 ಸಂಖ್ಯೆಯ ಡೀಸೆಲ್ ಟ್ಯಾಂಕರ್ ಅತಿ ವೇಗದ ಚಾಲನೆಯಿಂದಾಗಿ ಬೈಕ್ ಗೆ ಡಿಕ್ಕಿ ಹೊಡೆದು ಪಕ್ಕದಲ್ಲಿದ್ದ ಟ್ರಾನ್ಸ್ ಫಾರ್ಮ್ ಕಂಬಕ್ಕೆ ಹೊಡೆದ ನಂತರ ಪಲ್ಟಿಯಾಗಿದೆ.ರಸ್ತೆಯ ತುಂಬೆಲ್ಲ ನೀರಿನಂತೆ ಇಂಧನ( ಡೀಸೆಲ್ ) ಹರಿದ ಪರಿಣಾಮ ಸುತ್ತಮುತ್ತಲಿನ ಗ್ರಾಮಸ್ಥರು ಬಿಂದಿಗೆ,ಬಕೇಟು, ಡೀಸೆಲ್ ಕಾನುಗಳನ್ನು ಹಿಡಿದು ಮನಸೋ ಇಚ್ಛೆ ಡೀಸೆಲ್ ತುಂಬಿಕೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಈ ರಸ್ತೆಯಲ್ಲಿ ಪ್ರತಿ ದಿನಾಲು ನೂರಾರು ಟ್ಯಾಂಕರ್ ಲಾರಿಗಳು ಅತಿ ವೇಗವಾಗಿ ಚಲಿಸುತ್ತಿರುತ್ತವೆ. ರಸ್ತೆಯಲ್ಲಿ ಬಹಳಷ್ಟು ತಿರುವುಗಳಿದ್ದು,ತಿರುವುಗಳನ್ನು ಲೆಕ್ಕಿಸದೆ ಸಂಚಾರಿ ನಿಯಮವನ್ನು ಪಾಲಿಸದೆ ಅತಿ ವೇಗವಾಗಿ ಚಾಲಕರು ಗಾಡಿಯನ್ನು ಚಲಾಯಿಸುವುದು ಸರ್ವೇ ಸಾಮಾನ್ಯವಾಗಿದೆ.

ಕೂಡಲೆ ಸಂಬಂಧಪಟ್ಟ ಇಲಾಖೆ  ಮತ್ತು ಅಧಿಕಾರಿಗಳು ಇತ್ತ ಗಮನಹರಿಸಿ ಈ ರೀತಿಯ ಅನಾಹುತಗಳು ಆಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ಘಟನೆ ನಡೆದ ವಿಚಾರ ತಿಳಿದ ಕೂಡಲೇ ಹೊನ್ನವಳ್ಳಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ,ಡಿಸೇಲ್ ತುಂಬಿಸಿಕೊಳ್ಳಲು ನೂಕು ನುಗ್ಗಲು ಬಿದ್ದ ಸ್ಥಳಿಯರಿಗೆ ಅರಿವು ಮೂಡಿಸಿದ್ದಾರೆ,ಸ್ಥಳಕ್ಕೆ ಡಿ.ವೈ.ಎಸ್.ಪಿ.ವಿನಾಯಕ ಶೆಟಗೇರಿ, ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ, ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.