Saturday, 14th December 2024

ಕಲ್ಲೇಟಿಗೆ ಜಗ್ಗುವುದಿಲ್ಲ: ಪರಮೇಶ್ವರ್

ತುಮಕೂರು: ಕ್ರಿಯೆಗೆ ಪ್ರತಿಕ್ರಿಯೆ ನೀಡುವುದು ನನ್ನ ಉದ್ದೇಶವಲ್ಲ. ಈ ಘಟನೆಯನ್ನು ಸವಾಲಾಗಿ ಸ್ವೀಕರಿಸಿದ್ದು ಕ್ಷೇತ್ರದ ಜನತೆಗಾಗಿ ಪ್ರಚಾರ ಮುಂದುವರೆಸುತ್ತೇನೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.
ಹೆಗೆರೆಯ ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಲವು ರಾಜಯ ವಿರೋಧಿಗಳು ನನ್ನನ್ನು ಭಯಪಡಿಸುವ ಉದ್ದೇಶದಿಂದ ಈ ರೀತಿಯಾದ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ನಾನು ಹೆದರುವುದಿಲ್ಲ, ಬದಲಾಗಿ ರಾಜಕೀಯ ವಾಗಿಯೇ ಉತ್ತರ ನೀಡುತ್ತೇನೆ ಎಂದರು.
ನನ್ನ ೩೫ ವರ್ಷಗಳ ರಾಜಕೀಯ ಇತಿಹಾಸದಲ್ಲಿ ಅನೇಕ ಸೋಲು- ಗೆಲುವನ್ನು ನೋಡಿ ದ್ದೇನೆ. ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಸ್ಥಿತ ಪ್ರಜ್ಞನಾಗಿ ರಾಜಕೀಯ ಮಾಡಿದ್ದೇನೆ. ಇತ್ತೀಚಿನ ದಿನಗಳಲ್ಲಿ ಇಂಥಹ ಅಹಿತಕರ ಘಟನೆಗಳು ನಡೆಯುತ್ತಾ ಬರುತ್ತಿದ್ದು, ಮಾ. ೫ ರಂದು ನಡೆದ ರಾಜೀವ ಭವನ ಉದ್ಘಾಟನಾ ಸಮಾರಂಭದಲ್ಲಿನ ಲೋಪ, ನಾಮಪತ್ರ ಸಲ್ಲಸುವ ವೇಳೆ ನಡೆದ ಕಲ್ಲೆಸೆತ, ಪ್ರಚಾರದಲ್ಲಿ ನಡೆದ ಘಟನೆಗಳು ಕ್ಷೇತ್ರದಲ್ಲಿ ಅಶಾಂತಿಯ ವಾತಾವರಣ ಹರಡುತ್ತಿವೆ ಹಾಗೂ ಕ್ಷೇತ್ರದ ಜನರನ್ನು ಹಾಗೂ ಅಭಿಮಾನಿಗಳು, ಕಾರ್ಯಕರ್ತರನ್ನು ಆತಂಕಕ್ಕೆ ದೂಡುತ್ತಿವೆ. ಈ ಘಟನೆಯನ್ನು ಸವಾಲಾಗಿ ಸ್ವೀಕರಿಸಿದ್ದೇನೆ.
ಇದು ಚುಣಾವಣಾ ಸಮಯ, ವೈದ್ಯರು ಹಾಗೂ ಕುಟುಂಬದ ಸಲಹೆಯನ್ನು ಧಿಕ್ಕರಿಸಿ ಕ್ಷೇತ್ರದ ಜನತೆಗಾಗಿ ನಾನು ಪ್ರಚಾರಕ್ಕೆ ಧುಮುಕುತ್ತೇನೆ ಎಂದರು. ೩೫ ವರ್ಷದ ರಾಜಕೀಯದಲ್ಲಿ ಶತ್ರುಗಳು ಕಡಿಮೆ, ಚುನಾವಣೆ ಜನರ ತೀರ್ಪು, ಜನರ ಮುಂದೆ ಮತ ಕೇಳುತ್ತೇವೆ, ಆಶ್ವಾಸನೆ ಕೊಡುತ್ತೇವೆ ಅದನ್ನು ಬಿಟ್ಟು ಬೇರೆ ಮಾಡಬಾರದು, ದ್ವೇಷ ತಿರಿಸಿಕೊಳ್ಳುವುದಕ್ಕೆ ಸಾರ್ವಜನಿಕ ಜೀವನ ಬಳಸಿಕೊಳ್ಳಬಾರದು ಎಂದರು.
೧೯೯೯ರಲ್ಲೂ ಚಾಕುವಿನಿಂದ ತಿವಿಯಲು ಪ್ರಯತ್ನಿಸಿದ್ದರು ಈಗ ಮತ್ತೆ ಆಗಿದೆ, ಪಕ್ಷದ ಅಧ್ಯಕ್ಷರು ದೂರು ನೀಡಿದ್ದಾರೆ, ಪೊಲೀಸರು ತನಿಖೆ ನಡೆಸುವಂತೆ ಮನವಿ ಮಾಡಿದ್ದೇನೆ ಎಂದು ಹೇಳಿದರು. ಘಟನೆ ನಡದ ಹಿನ್ನೆಲೆಯಲ್ಲಿ ಮಾನಸಿಕವಾಗಿ ಕುಗ್ಗಬೇಡಿ ಎಂದು ನಮ್ಮ ಪಕ್ಷದ ರಾಷ್ಟಿçÃಯ ನಾಯಕರಾದ ಎಂ. ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮೈಸೂರಿನ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೆಂದ್ರ ಮಹಾಸ್ವಾಮೀಜಿ ಸೇರಿದಂತೆ ಅನೇಕರು ಮಠಾಧೀಶರು, ಸಾಹಿತಿಗಳು ಮತ್ತು ಹೋರಾಟಗಾರರು ದೂರವಾಣಿ ಕರೆ ಮಾಡಿ, ಆರೋಗ್ಯ ವಿಚಾರಿಸಿದರು.
ಅವರೆಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು. ನಾಯಕನಿಗೆ ದೈಹಿಕವಾಗಿ ಪೆಟ್ಟು ಬಿದ್ದಾಗ ಮತ್ತು ಹಲ್ಲೆಯಾದಾಗ ಕಾರ್ಯಕರ್ತರು ಪ್ರತಿಭಟಿಸುವುದು, ಆರೋಪ ಮಾಡುವುದು ಸಹಜ. ನಾನು ಸದಾ ಜನ ಸಮುದಾಯದೊಂದಿಗೆ ಆರೋಗ್ಯ, ಶಿಕ್ಷಣ ಮತ್ತು ಜನಸೇವೆಯಲ್ಲಿ ಇದ್ದವನು. ನನಗೆ ಸಾರ್ವಜನಿಕವಾಗಿ ದಾಳಿ ಮಾಡುತ್ತಾರೆಂಬ ಭಯವಿಲ್ಲ. ಆದ್ದರಿಂದ ನನಗೆ ಪೊಲೀಸ್ ಭದ್ರತೆಯ ಅವಶ್ಯಕತೆ ಇಲ್ಲ ಎಂದರು.

ಸತ್ಯಾಸತ್ಯತೆ ಹೊರಬರಲಿ
ರಾಜ್ಯ, ಜಿಲ್ಲೆ, ಕ್ಷೇತ್ರದ ಜನಕ್ಕೆ ಇದು ಪ್ರಶ್ನೆಯಾಗಿ ಉಳಿಯಬಾರದು ಹಾಗಾಗಿ ಇದರ ನಿಷ್ಪಕ್ಷಪಾತ ತನಿಖೆಯಾಗಬೇಕು, ನಮ್ಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಕಾರ್ಯಕರ್ತರು ದೂರು ನೀಡಿದ್ದು ಇದರ ಹಿಂದಿನ ಸತ್ಯಾಸತ್ಯತೆಯು ಹೊರಬರಲಿ ಎಂಬುದೇ ನಮ್ಮ ಉದ್ದೇಶವಾಗಿದೆ. ಹೂ ಎಸೆಯುವವರಿಗೆ ಕಲ್ಲು ಇರೋದು ಗೊತ್ತಾಗುತ್ತೆ, ಪೊಲೀಸರಿಗೆ ತನಿಖೆ ಮಾಡುವಂತೆ ತಿಳಿಸಿದ್ದೇನೆ ಎಂದು ಪರಮೇಶ್ವರ್ ಹೇಳಿದರು.

ಡ್ರಾಮಾ ಮಾಡುವ ಅಗತ್ಯವಿಲ್ಲ
ಪರಮೇಶ್ವರ್ ಅವರಿಗೆ ಕಲ್ಲೇಟು ಬಿದ್ದಿಲ್ಲ ಅದು ಡ್ರಾಮಾ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ಒಂದೂವರೆ ಇಂಚು ಗಾಯವಾಗಿದೆ. ಏಟು ತಿಂದಿರೋನು ನಾನು. ವೈದ್ಯರು ಅನುಮತಿ ಕೊಟ್ಟರೆ ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇನೆ. ನನಗೆ ಡ್ರಾಮಾ ಮಾಡುವ ಅಗತ್ಯವಿಲ್ಲ,ಕುಮಾರಸ್ವಾಮಿಗೆ ಡ್ರಾಮಾ ಮಾಡಿ ಅಭ್ಯಾಸ ಇರಬೇಕು ಅದಕ್ಕೆ ಹಾಗೆ ಹೇಳಿದ್ದಾರೆ ಎಂದು ಎಚ್‌ಡಿಕೆಗೆ ತಿರುಗೇಟು ನೀಡಿದರು.

ಮಠಾಧೀಶರ ಭೇಟಿ
ಕಲ್ಲೆಟಿನಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಪರಮೇಶ್ವರ ಅವರು ನಿವಾಸಕ್ಕೆ ರಾಮಕೃಷ್ಣ ಮಠದ ಶ್ರೀ ವಿರೇಶಾನಂದ ಸ್ವಾಮೀಜಿ, ಬೆಳ್ಳಾವಿ ಕಾರದ ಮಠದ ವೀರಬಸವ ಮಹಾಸ್ವಾಮೀಜಿ ಸೇರಿ ಅನೇಕ ಸ್ವಾಮೀಜಿಗಳು, ತುಮಕೂರು ಜಿಲ್ಲೆಯ ಕಾಂಗ್ರೆಸ್ ನಾಯಕರಾದ ರಾಜಣ್ಣ, ಷಡಕ್ಷರಿ, ಇಕ್ಬಾಲ್ ಅಹಮ್ಮದ್, ಗ್ರಾಮಾಂತರ ಅಭ್ಯರ್ಥಿ ಷಣ್ಮಖಪ್ಪ ಭೇಟಿ ನೀಡಿ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದರು.