Saturday, 14th December 2024

ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿ- ಹೆಮ್ಮೆಯ ಸಂಗತಿ: ಬಿ.ಸಿ.ನಾಗೇಶ್

ತಿಪಟೂರು: ಪ್ರತಿಯೊಂದು ತಾಲ್ಲೂಕಿಗೂ ಅಗತ್ಯವಿರುವಂತಹ ವಿದ್ಯುತ್‌ನ್ನು ಸ್ಥಳೀಯವಾಗಿಯೇ ವಿವಿಧ ಶಕ್ತಿಗಳಿಂದ ಉತ್ಪಾದನೆ ಮಾಡಿ ಕೊಳ್ಳುತ್ತಿದ್ದು, ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಭಿ ರಾಜ್ಯವಾಗಿ ಹೊರಹೊಮ್ಮೆರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

ತಿಪಟೂರು ನಗರದ ಬೆಸ್ಕಾಂ ಕಚೇರಿಯಲ್ಲಿ ಗುರುವಾರ ಕಾರ್ಯ ಮತ್ತು ಪಾಲನಾ ಉಪ-ವಿಭಾಗ ಕಚೇರಿ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಪ್ರತಿಯೊಬ್ಬರ ಜೀವನದಲ್ಲಿ ವಿದ್ಯುತ್ ಇಲ್ಲದೇ ಜೀವನ ನಿರ್ವಹಣೆ ಮಾಡಲು ಸಾಧ್ಯವಿಲ್ಲದಂತಹ ಸ್ಥಿತಿ ನಿರ್ಮಾಣ ವಾಗಿದೆ. ದೇಶದ ಅಭಿವೃದ್ಧಿಗೆ ವಿದ್ಯುತ್‌ನ ನೇರ ಸಂಪರ್ಕವಿದೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಇಂದು ಕರ್ನಾಟಕ ವಿದ್ಯುತ್ ಉತ್ಪಾದನೆಯಲ್ಲಿ ಹೆಮ್ಮೆಯ ರಾಜ್ಯವಾಗಿದೆ.

ವಿದ್ಯುತ್ ಎಂದರೆ ಕೆಲವರಿಗೆ ಮಾತ್ರ ಸೀಮಿತವಾಗಿದ್ದು ಇಂದು ಎಲ್ಲರಿಗೂ ವಿದ್ಯುತ್ ನೀಡಲಾಗುತ್ತಿದೆ. ಅದ್ದರಿಂದ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದು ಪ್ರತಿ ತಾಲ್ಲೂಕಿನಲ್ಲಿ ಜನ ಸ್ನೇಹಿ ವಿದ್ಯುತ್ ಉತ್ಪಾದನೆ ಆಗಬೇಕು ಎಂದು ಗಾಳಿ, ಸೌರ ಶಕ್ತಿ ಸೇರಿದಂತೆ ಇನ್ನಿತರೆ ಕಡೆಗಳಿಂದ ವಿದ್ಯುತ್ ಉತ್ಪಾದನೆಗೆ ಮುಂದಾಗಿದ್ದೇವೆ.

ಪ್ರತಿಯೊಂದು ತಾಲ್ಲೂಕಿಗೆ ಅಗತ್ಯವಿರುವ ವಿದ್ಯುತ್ ಉತ್ಪಾದನೆ ಮಾಡಿಕೊಳ್ಳುವಂತಹ ಕಾರ್ಯವನ್ನು ಮಾಡಲು ನರೇಂದ್ರ ಮೋದಿ ಮುಂದಾಗಿದ್ದಾರೆ. ಇಂತಹ ಪ್ರಯತ್ನಗಳ ಮೂಲಕ ಸಂಪೂರ್ಣವಾಗಿ ವಿದ್ಯುತ್ ಉತ್ಪಾದನೆ ಯಲ್ಲಿ ಸ್ವಾಲಂಭಿಗಳಾಗಿದ್ದೇವೆ. ಇದೀಗ ವಿದ್ಯುತ್ ಇಲಾಖೆಯ ಕಾರ್ಯ ಗುಣಮಟ್ಟದ ಹಾಗೂ ನಿರಂತರ ವಿದ್ಯುತ್ ನೀಡುವ ಕಡೆಗೆ ಇದ್ದು ಅದಕ್ಕೆ ಬೇಕಾದ ವಿಜ್ಞಾನದ ಸಂಶೋಧನೆಗಳನ್ನು ಪ್ರಯೋಗಿಕವಾಗಿ ಮಾಡಲು ಮುಂದಾಗಿದ್ದೇವೆ. ೨೦೪೦ರ ಒಳಗೆ ಏನು ಬೇಕು ಎಂಬುದನ್ನು ಅದರಲ್ಲಿಯೂ ತಿಪಟೂರು ಜಿಲ್ಲಾ ಕೇಂದ್ರವಾದರೆ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ.

೧೯೪೦ರಲ್ಲಿ ಇಲ್ಲಿ ಕಾರ್ಯನಿರ್ವಹಣೆ ಕಚೇರಿ ಸ್ಥಾಪನೆ ಆಗಿದ್ದು ಇಲ್ಲಿಯವರೆವಿಗೂ ಯಾವುದೇ ಕಚೇರಿ ಇಲ್ಲದ ಕಾರಣ ೧ ಕೋಟಿ ವೆಚ್ಚದಲ್ಲಿ ನೂತನ ಕಚೇರಿ ನಿರ್ಮಾಣ ಮಾಡಿದ್ದೇವೆ. ತಾಲ್ಲೂಕಿನಲ್ಲಿ ಹೊಸ ವಿದ್ಯುತ್ ೩ ಪವರ್ ಸ್ಟೇಷನ್‌ಗೆ ಮನವಿ ಮಾಡಿದ್ದು, ಎರಡು ಗುದ್ದಲಿ ಪೂಜೆ ಆಗಿದ್ದು ಒಂದಕ್ಕೆ ಜಾಗವನ್ನು ಗುರುತಿಸುವ ಕಾರ್ಯವಾಗಬೇಕಿದೆ. ಇತ್ತೀಚಿನ ದಿನಗಳ್ಲಲಿ ಓವರ್ ಲೋಡ್ ನಿಂದ ಟ್ರಾನ್ಸ್ಫರ್ಮರ್ ಹಾಳಾಗುತ್ತಿದ್ದು ಕೇಂದ್ರ ಸರ್ಕಾರದ ಯೋಜನೆಯ ಅಡಿಯಲ್ಲಿ ಎಲ್ಲರಿಗೂ ಸಿಗುವಷ್ಟು ಪೂರ್ಣ ಪ್ರಮಾಣದಲ್ಲಿ ಟೆಂಡರ್ ಆಗಿದ್ದು ಕೆಲ ದಿನಗಳಲ್ಲಿ ಕಾಮಗಾರಿಗೆ ಚಾಲನೆ ದೊರೆಯುವ ನಿರೀಕ್ಷೆ ಇದೆ ಎಂದರು.

ಈ ಸಂದರ್ಭದಲ್ಲಿ ತುಮಕೂರು ಅಧೀಕ್ಷಕ ಇಂಜಿನಿಯರ್ ಕೆ.ಎಲ್.ಲೋಕೇಶ್, ಕಾರ್ಯನಿರ್ವಾಹಕ ಸಿವಿಲ್ ಇಂಜಿನಿಯರ್ ಎಂ.ಕೆ.ಪ್ರವೀಣ್, ಕಾರ್ಯನಿರ್ವಾಹಕ ಇಂಜಿನಿಯರ್ ಸೋಮಶೇಖರ ಗೌಡ, ಲೆಕ್ಕಾಧಿಕಾರಿ ಕುಮಾರಸ್ವಾಮಿ, ಅಂತರಿಕ ಲೆಕ್ಕ ಪರಿಶೋಧನೆ ಪ್ರಕಾಶ್, ಎಇಇ ಟಿ.ಎಲ್.ಮನೋಹರ್, ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ನರಸಿಂಹಮೂರ್ತಿ, ರಾಜಶೇಖರ್, ಚಿ.ನಾ.ಹಳ್ಳಿ ಎಇಇ ರಾಜಶೇಖರ್, ತುರುವೇಕೆರೆ ಎಇಇ ಚಂದ್ರನಾಯ್ಕ, ಕಚೇರಿ ಎಇಇ ಶಿವನಾಗೇಂದ್ರಪ್ಪ, ಎಇಇ ಹರಿಹರಪ್ಪ ಇದ್ದರು.