Wednesday, 11th December 2024

ಎಚ್ಎಎಲ್ ನಕಲಿ ನೇಮಕಾತಿ: ಕಡಿವಾಣ ಹಾಕಲು ಆಗ್ರಹ

ತುಮಕೂರು: ಜಿಲ್ಲೆಯ ಗುಬ್ಬಿ ಬಳಿ ಲೋಕಾರ್ಪಣೆ ಗೊಂಡಿರುವ ಎಚ್‌ಎಎಲ್ ಘಟಕವನ್ನು ಆಧಾರವಾಗಿಟ್ಟುಕೊಂಡಿರುವ ಕೆಲವು ಸಾಮಾಜಿಕ ಜಾಲತಾಣದಲ್ಲಿ  ವಂಚಕರು ಹೆಚ್‌ಎಎಲ್ ಘಟಕದಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನಿಸಲಾಗಿದೆ, ಕೂಡಲೇ ಸಂಪರ್ಕಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಜಾಹಿರಾತು ಸಂದೇಶ ರವಾನಿಸಿ ನಿರುದ್ಯೋಗಿ ಅಮಾಯಕನ್ನು ವಂಚಿಸುತ್ತಿರುವುದಕ್ಕೆ ಕಡಿವಾಣ ಹಾಕುವಂತೆ ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿಗಳಿಗೆ ಪತ್ರ ಬರೆದಿರುವ ಅವರು , ಕಳೆದ ಒಂದು ವಾರದಿಂದ ಕೆಲವು ಅನಧಿಕೃತ ವ್ಯಕ್ತಿಗಳು ಈ ದಂಧೆಗೆ ಇಳಿದಿದ್ದು ಹೆಚ್‌ಎಎಲ್ ಘಟಕಕ್ಕೆ ಐಟಿಐ, ಡಿಪ್ಲೊಮಾ ಆಗಿರುವವರು ಅರ್ಜಿ ಸಲ್ಲಿಸಿ, ಸ್ಥಳೀಯರು ಮತ್ತು ನಿಮ್ಮ ಅಕ್ಕಪಕ್ಕದವರಿಗೆ ತಿಳಿಸಿ ಎಂದು ಅನಧಿಕೃತ ಪ್ರಜೋದಾನ್ಮಕ ಜಾಹಿರಾತಿನ ಮೂಲಕ ಸಾರ್ವಜನಿಕರನ್ನು ಚಂಚಿಸುತ್ತಿದ್ದಾರೆ0ದು ವಿವರಿಸಿದ್ದಾರೆ.
ಸ್ಥಳೀಯರು ಶೀಘ್ರಿ ಅರ್ಜಿ ಸಲ್ಲಿಸದಿದ್ದಲ್ಲಿ ಉತ್ತರ ಭಾರತದ ರಾಜ್ಯಗಳಿಂದ ಕೆಲಸಕ್ಕೆ ಬರುತ್ತಾರೆ, ಕನ್ನಡಿಗರು ಉದ್ಯೋಗದಿಂದ ವಂಚಿತರಾಗುತ್ತಾರೆ. ಆದ ಕಾರಣ ಕನ್ನಡಿಗರಿಗೆ ಮೊದಲ ಆದ್ಯತೆ ಸಿಗಬೇಕು ಎಂದೆಲ್ಲಾ ಹೆಳಿಕೆ ಯಿರುವ ಅನಧಿಕೃತ ಜಾಹಿರಾತು ಸಂದೇಶ ವಾಟ್ಸಪ್, ಫೇಸ್‌ಬುಕ್‌ಗಳಲ್ಲಿ ‘ವ್ಯವಸ್ಥಾಪಕ ಶಿವಕುಮಾರ್’ (ಕೆಲವರ ಹೆಸರನ್ನು ಹಾಕಿಕೊಂಡು ಒಂದೆರಡು ಮೊಬೈಲ್ ಸಂಖ್ಯೆಗಳನ್ನೂ ಸಹ ಅದರಲ್ಲಿ ನಮೂದಿಸಿದ್ದಾರೆ.) ಎಂಬ ಹೆಸರು ಹರಿಯಬಿಡುತ್ತಿದ್ದಾರೆ. ಇಂತಹ ಅನಧಿಕೃತ ವಂಚನೆ ಜಾಲದ ವಿರುದ್ಧ ಕ್ರಮಕೈಗೊಳ್ಳುವಂತೆ ಮುರಳೀಧರ ಹಾಲಪ್ಪ ಆಗ್ರಹಿಸಿದ್ದಾರೆ.
ಕಂಪನಿ ಅಥವಾ ಉದ್ದಿಮೆಗಳಲ್ಲಿ ಅವಕಾಶ ಸಿಕ್ಕರೆ ಸಾಕು ಎಂಬ ಮನಸ್ಥಿತಿಯಲ್ಲಿರುವ ಉದ್ಯೋಗದ ನಿರೀಕ್ಷೆಯಲ್ಲಿರುವವರು, ಡಿಪ್ಲೊಮಾ, ಐಟಿಐ ಪಾಸ್ ಆಗಿರುವವರು ಈ ವಂಚನೆ ಬಲೆಗೆ ಬಲಿಯಾಗುತ್ತಿದ್ದಾರೆ. ಕೆಲವು ವಂಚಕರು ತಮ್ಮ ಮೊಬೈಲ್ ಸಂಖ್ಯೆಗಳನ್ನು ಹಾಕಿಕೊಂಡು ಹಣ ಪೀಕುವ ದಂಧೆಗೆ ಇಳಿದಿದ್ದಾರೆ.ಈ ಕೂಡಲೇ ಇಂತಹ ಜಾಲವನ್ನು ಬೇಧಿಸಿ, ಅವರನ್ನು ಕಾನೂನಿನಡಿಯಲ್ಲಿ ಬಂಧಿಸಬೇಕೆಂದು  ಒತ್ತಾಯಿಸಿದ್ದಾರೆ.
ಗುಬ್ಬಿ ತಾಲ್ಲೂಕಿನ ಬಿದಿರೆ ಹಳ್ಳಕಾವಲ್‌ನಲ್ಲಿ ಪ್ರಧಾನಿಯವರಿಂದ ಉದ್ಘಾಟನೆಗೊಂಡಿರುವ ಎಚ್‌ಎಎಲ್ ಘಟಕ ಪ್ರದೇಶಕ್ಕೆ ಮಾಜಿ ಉಪಮುಖ್ಯಮಂತ್ರಿ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ನಿಯೋಗ ಭೇಟಿಕೊಟ್ಟು ವಾಸ್ತವ ಪರಿಸ್ಥಿಯನ್ನು ಅವಲೋಕಿಸಿದ್ದು, ಸ್ಥಳೀಯರಿಗೆ ಆದ್ಯತೆ ನೀಡಬೇಕೆಂದು ಉಸ್ತುವಾರಿ ಹೊತ್ತಿರುವ ಹಿರಿಯ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದೆ. ಈ ಹಿನ್ನಲೆಯಲ್ಲಿ ಸ್ಥಲೀಯರಿಗೆ ಸೂಕ್ತ ಅವಕಾಶ ನೀಡಬೇಕೆಂಬ ಕೂಗಿಗೆ ನಾವು ದನಿಗೂಡಿಸುತ್ತೇವೆ. ಆದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವ ಸುಳ್ಳು ಜಾಹಿರಾತುಗಳನ್ನು ನಂಬಿ ಉದ್ಯೋಗ ಅಕಾಂಕ್ಷಿಗಳು ವಂಚನೆ ಗೊಳಗಾಗಬಾರದೆಂದು ಕರೆ ನೀಡಿದ್ದಾರೆ.