Saturday, 14th December 2024

ಆರೋಗ್ಯ ಕೇಂದ್ರ, ಯುವಜನ ಸ್ಪಂದನ, ವೈಜ್ಞಾನಿಕ ಬೆಲೆ, ಬಡ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನನ್ನ ಆಧ್ಯತೆ : ಸಿಬಿ ಶಶೀಧರ್

ರಾಜ್ಯಕ್ಕೆ ಕಾಂಗ್ರೆಸ್ ಗ್ಯಾರಂಟಿ ಯೋಜನೆ: ತಿಪಟೂರಿಗೆ ಟೂಡಾ ಶಶಿಧರ್ ಗ್ಯಾರಂಟಿ ಯೋಜನೆ

ತಿಪಟೂರು: ಕರ್ನಾಟಕಕ್ಕೆ ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿ ಯೋಜನೆಗಳೊಂದಿಗೆ ತಿಪಟೂರಿನ ಸಮಗ್ರ ಅಭಿವೃದ್ಧಿಗಾಗಿ ಕಾಂಗ್ರೆಸ್ ಮುಖಂಡರಾದ ಸಿ.ಬಿ. ಶಶಿಧರ್ ಟೂಡಾ ಅವರು ತಾಲ್ಲೂಕಿಗೆ ನಾಲ್ಕು ಅಧಿಕೃತ ಯೋಜನೆಗಳನ್ನು ಘೋಷಿಸಿದ್ದಾರೆ.

ತಾಲ್ಲೂಕಿನ ನೊಣವಿನಕೆರೆ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಜನಸಾಮಾನ್ಯರ ಬದುಕಿನಲ್ಲಿ ಬೆಳಕು ತರಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ ಗ್ಯಾರಂಟಿ ಘೋಷಣೆಗಳಾದ ಉಚಿತ ೨೦೦ ಯುನಿಟ್ ವಿದ್ಯುತ್ ನೀಡುವ ಗೃಹಜ್ಯೋತಿ, ಪ್ರತಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ರೂ.೨೦೦೦ ನೀಡುವ ಗೃಹಲಕ್ಷ್ಮಿ ಹಾಗೂ ಕುಟುಂಬದ ಪ್ರತಿ ವ್ಯಕ್ತಿಗೆ ೧೦ ಕೆ.ಜಿ. ಉಚಿತ ಅಕ್ಕಿ ನೀಡುವ ಅನ್ನಭಾಗ್ಯ ಸೇರಿದಂತೆ ಹತ್ತು ಹಲವಾರು ವಿನೂತನ ಯೋಜನೆಗಳೊಂದಿಗೆ ಕಾಂಗ್ರೆಸ್ ಪಕ್ಷ ಜನಪರ ಆಡಳಿತಕ್ಕೆ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ನನ್ನ ತಿಪಟೂರಿನ ಜನತೆಯ ಅಭಿವೃದ್ಧಿಗಾಗಿ ಈಗಾಗಲೇ ಗ್ರಾಮೀಣ ಭಾಗದಲ್ಲಿ ನಮ್ಮ ಆರೋಗ್ಯ ಕೇಂದ್ರಗಳನ್ನು ಪ್ರಾರಂಭಿಸಿರುವೆ.

ಈ ಆರೋಗ್ಯ ಕೇಂದ್ರಗಳು ಗ್ರಾಮೀಣ ಭಾಗದ ಮಹಿಳೆಯರಿಗೆ ಸಂಬ0ಧಿಸಿದ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಸಮಾಲೋಚನೆ ಹಾಗೂ ಪರಿಹಾರ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ನೊಣವಿನಕೆರೆ ಭಾಗದಲ್ಲಿ ಗ್ರಾಮೀಣ ಮಹಿಳೆಯರಿಗಾಗಿ ನಮ್ಮ ಆರೋಗ್ಯ ಕೇಂದ್ರ ಪ್ರಾರಂಭ ಮಾಡುವ ಮಹತ್ತರ ಯೋಜನೆ ಹಮ್ಮಿಕೊಂಡಿದ್ದೇವೆ.

ತಿಪಟೂರಿನ ಯುವ ಜನತೆಗಾಗಿ ಯುವಜನ ಸ್ಪಂದನ ಕೌಶಲ್ಯ ತರಬೇತಿ ಕೇಂದ್ರ ಪ್ರಾರಂಭ ಮಾಡಲಿದ್ದು, ಈಗಾಗಲೇ ನೋಂದಣಿ ಪ್ರಕ್ರಿಯೆ ಪ್ರಾರಂಭ ವಾಗಿದೆ. ಆಸಕ್ತರು ೮೦೭೩೬೧೯೯೬೯ ಈ ನಂಬರ್ ಕರೆ ಮಾಡಿ ನೋಂದಾಯಿಸಿಕೊಳ್ಳಿ, ಮೊದಲು ಬಂದವರಿಗೆ ಆದ್ಯತೆ. ಈ ಎಲ್ಲಾ ಯೋಜನೆಗಳೊಂದಿಗೆ ನಾನು ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಜತೆಗೆ ತಿಪಟೂರಿನ ಜನತೆಗೆ ಟೂಡಾ ಶಶಿಧರ್ ಗ್ಯಾರಂಟಿ ಯೋಜನೆಗಳ್ನು ಘೋಷಣೆ ಮಾಡುತ್ತಿದ್ದು, ತಾಲ್ಲೂಕಿನ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಯಲ್ಲಿ ಶೇ.೭೫ರಷ್ಟು ಗಳಿಸಿ ಉತ್ತೀರ್ಣರಾಗಿದ್ದರೆ. ಕನಿಷ್ಟ ಅಂದರೆ ರೂ.೨೦೦೦ ಗರಿಷ್ಠ ಅಂದರೆ ರೂ.೫೦೦೦ ಸ್ಕಾಲರ್ ಶಿಪ್ ನೀಡುವ ಯೋಜನೆ, ತಾಲ್ಲೂಕಿನಾದ್ಯಂತ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಆರೋಗ್ಯ ಕೇಂದ್ರಗಳ ಪ್ರಾರಂಭ, ದುಡಿಯುವ ಕೈಗಳಿಗೆ ಕೆಲಸ ನೀಡುವ ಮಹತ್ತರ ಯೋಜನೆಗಳನ್ನು ನಿಮ್ಮ ಮುಂದಿಡುತ್ತಿರುವೆ.

ರೈತರು ಬೆಳೆಯುವ ಬೆಳೆಗಳಿಗೆ ನ್ಯಾಯಯುತವಾದ ವೈಜ್ಞಾನಿಕ ಬೆಲೆ ನೀಡಲು ನಾನು ಎಂದಿಗೂ ನಿಮ್ಮೊಂದಿಗಿದ್ದೇನೆ. ನಿಮ್ಮ ಆಶೀರ್ವಾದ ನನ್ನ ಮೇಲಿರಲಿ. ನಾನು ತಿಪಟೂರಿನ ಜನತೆಯ ಸೇವೆ ಮಾಡಲು ಸದಾ ಸಿದ್ಧನಾಗಿರುತ್ತೇನೆ ಎಂದರು.

ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಉಮಾಶಂಕರ್, ಆಲ್ಬೂರು ಮಹಲಿಂಗಪ್ಪ, ನೆಲ್ಲಿಗೆರೆ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ್ಯೆ ಅನಿತ ಹಾಗೂ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು.