Sunday, 15th December 2024

Honey Trap: ಷಡಕ್ಷರಿ ಮಠದ ಸ್ವಾಮೀಜಿಗೆ ಹನಿಟ್ರ್ಯಾಪ್‌, ಮೂವರು ಆರೋಪಿಗಳ ಸೆರೆ

honey trap

ಬೆಂಗಳೂರು: ತಿಪಟೂರು ಷಡಕ್ಷರಿ ಮಠದ ರುದ್ರಮುನಿ ಸ್ವಾಮೀಜಿಯನ್ನು ಹನಿಟ್ರ್ಯಾಪ್‌ (Honey Trap) ಮಾಡಿ ಅವರಿಂದ ಬರೋಬ್ಬರಿ 6 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು (bengaluru Crime news) ಬಂಧಿಸಿದ್ದಾರೆ.

ಆರೋಪಿಗಳಲ್ಲಿ ಒಬ್ಬಾಕೆ ಸ್ವಾಮೀಜಿಯ ಸಂಗ ಬೆಳೆಸಿ ಹನಿಟ್ರ್ಯಾಪ್‌ ಮಾಡಿ ತಮ್ಮ ಖಾಸಗಿ ವೇಳೆಯ ವಿಡಿಯೋ ಚಿತ್ರೀಕರಿಸಿಕೊಂಡಿದ್ದಳು. ಹೀಗೆ ಹನಿಟ್ರ್ಯಾಪ್‌ ಮಾಡಿ ಖೆಡ್ಡಾಕ್ಕೆ ಬೀಳಿಸಿದ್ದ ತಂಡದ ವಿದ್ಯಾ ಬಿರಾದರ್ ಪಾಟೀಲ್ ಹಾಗೂ ಆಕೆಯ ಸಹಚರರಾದ ಗಗನ್, ಸೂರ್ಯನಾರಾಯಣ್ ಎಂಬವರನ್ನು ಪೊಲೀಸರು ಹೆಡೆಮುರಿ
ಕಟ್ಟಿದ್ದಾರೆ.

ರುದ್ರಮುನಿ ಸ್ವಾಮೀಜಿಗೆ ಅವರ ಖಾಸಗಿ ಸಮಯದ ವಿಡಿಯೋ ಪೆನ್‌ಡ್ರೈವ್ ತೋರಿಸಿ ಬೆದರಿಕೆ ಹಾಕಲಾಗಿದೆ. ಹಣ ಕೊಟ್ಟರೆ ಪೆನ್ ಡ್ರೈವ್ ಕೊಡುವುದಾಗಿ ಬೆದರಿಸಿದ್ದಾರೆ. ವಿದ್ಯಾ ಬಿರಾದರ್ ಪಾಟೀಲ್, ಗಗನ್, ಸೂರ್ಯನಾರಾಯಣ ಸೇರಿ ಮೂವರೂ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಬೆಂಗಳೂರಿನಲ್ಲಿ
ಗಾಂಧಿನಗರದ ರಾಮಕೃಷ್ಣ ಹೋಟೆಲ್‌ನಲ್ಲಿ ಒಟ್ಟು 6 ಕೋಟಿ ರೂ. ಹಣವನ್ನು ನೀಡುವಂತೆ ಬೆದತರಿಕೆ ಒಡ್ಡಲಾಗಿದೆ. ನೀವು ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ʼರಾಸಲೀಲೆʼ ವಿಡಿಯೋ ಹರಿಬಿಡುವುದಾಗಿ ತಂಡ ಬೆದರಿಕೆ ಹಾಕಿದೆ.

ಬೆದರಿದ ಸ್ವಾಮೀಜಿ, ಹಣವನ್ನು ಹೊಂದಿಸಲಾಗದೆ ಗುಪ್ತವಾಗಿ ಬಂದು ಸಿಸಿಬಿಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಪ್ರಕರಣದ ಬೆನ್ನು ಹತ್ತಿ ಮೂವರು ವಂಚಕರನ್ನು ಖೆಡ್ಡಾಕ್ಕೆ ಬೀಳಿಸಿದ್ದಾರೆ.

ಇದೇ ರೀತಿ ಇತ್ತೀಚೆಗೆ ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ಗ್ರಾಮದ ರಾಮರೂಢ ಮಠದ ಪರಮ ರಾಮರೂಢ ಸ್ವಾಮೀಗೂ ಬೆದರಿಕೆ ಹಾಕಲಾಗಿತ್ತು. ಜೆಡಿಎಸ್ ನಾಯಕ ಪ್ರಕಾಶ್‌ ಮುಧೋಳ್ ಎನ್ನುವಾತ ಬರೋಬ್ಬರಿ 1 ಕೋಟಿ ರೂ. ವಂಚನೆ ಮಾಡಿದ್ದ. ನಾನು ಬೆಂಗಳೂರು ಡಿಸಿಪಿ, ನಿಮ್ಮ ವಿರುದ್ಧ ಹಾಗೂ ಮಠದ ವಿರುದ್ಧ ಗಂಭೀರ ದೂರು ಕೇಳಿ ಬಂದಿದ್ದು, ನೀವು 1 ಕೋಟಿ ರೂ. ಕೊಟ್ಟರೆ ಈ ಪ್ರಕರಣ ಮುಚ್ಚಿ ಹಾಕುವುದಾಗಿ ಹೇಳಿದ್ದ. ಇದನ್ನು ನಿರ್ಲಕ್ಷ್ಯ ಮಾಡಿದ್ದ ಸ್ವಾಮೀಜಿಯ ಮನೆಗೆ ಅಸಲಿ ಪೊಲೀಸರನ್ನು ಕಳುಹಿಸಿ ಅವರಿಂದ ಸ್ವಾಮೀಜಿಗೆ ಫೋನ್ ಕೊಟ್ಟು ಮಾತನಾಡಿಸಿ ಬೆದರಿಕೆ ಹಾಕಿದ್ದ. ಸ್ವಾಮೀಜಿ ಎರಡು ಕಂತುಗಳಲ್ಲಿ ಒಂದು ಕೋಟಿ ರೂ. ಹಣವನ್ನೂ ಕೊಟ್ಟಿದ್ದರು. ಇದಾದ ಮೇಲೆಯೂ ಪುನಃ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿ ಪ್ರಕಾಶ ಮುಧೋಳ ಸಿಕ್ಕಿ ಬಿದ್ದಿದ್ದಾನೆ.

ಇದನ್ನೂ ಓದಿ: Honey Trap: ಲೈಂಗಿಕ ಕ್ರಿಯೆಯ ಆಸೆ ತೋರಿಸಿ ಹನಿಟ್ರ್ಯಾಪ್‌; ಮರ್ಯಾದೆಗೆ ಅಂಜಿ ಕೋಟಿ ರೂ. ಕೊಟ್ಟ ನಿವೃತ್ತ ಅಧಿಕಾರಿ!