ತುಮಕೂರು: ಸೂರಿಲ್ಲದ ಜನರನ್ನು ಗುರುತಿಸಿ, ಅವರಿಗೆ ವಸತಿ ಒದಗಿಸುವುದು ಪ್ರತಿಯೊಂದು ನಾಗರಿಕ ಸರಕಾರದ ಕರ್ತವ್ಯವಾಗಿದೆ.ಆದರೆ ಸೂರಿಗಾಗಿ ಕೋಟಿ ಹೆಜ್ಜೆಗಳನಿಟ್ಟು ಹೋರಾಟ ನಡೆಸಬೇಕಾದ ಅಗತ್ಯ ಸೃಷ್ಟಿಯಾಗಿರುವುದು ವಿಪರ್ಯಾಸದ ಸಂಗತಿ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸಾತೀ ಸುಂದರೇಶ್ ತಿಳಿಸಿದರು.
ನಗರದ ಟೌನ್‌ಹಾಲ್ ಮುಂಭಾಗದಲ್ಲಿ ಸೂರಿಗಾಗಿ ಕೋಟಿ ಹೆಜ್ಜೆ, ಸಿಪಿಐ ಹಮ್ಮಿಕೊಂಡಿರುವ ಪಾದಯಾತ್ರೆ ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಎಂತಹ ಬಲಿಷ್ಠ ಸರಕಾರಗಳನ್ನು ಮಂಡಿಯೂರು ವಂತೆ ಮಾಡುವ ಶಕ್ತಿ ಚಳವಳಿಗಳಿಗೆ ಇದೆ. ಹಾಗಾಗಿ ಯಾರು ನಿರಾಶ ರಾಗದೆ, ನಿರಂತರವಾಗಿ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ದುಡಿಯಲು ಕಸುವು ಇದ್ದು, ಫಾರಂ 50,53 ಮತ್ತು 57ರಲ್ಲಿ ಅರ್ಜಿ ಸಲ್ಲಿಸಿ, ಭೂಮಿ ಕೇಳಿದರೆ ಇಲ್ಲ ಎನ್ನುವ ಸರಕಾರಗಳು ಮಠ, ಮಾನ್ಯಗಳಿಗೆ 17 ಲಕ್ಷ ಎಕರೆ ಸರಕಾರಿ ಗೋಮಾಳವನ್ನು ನೀಡಿ,ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿದ್ದಾರೆ. ಇವುಗಳ ವಿರುದ್ದ ನಾವೆಲ್ಲರೂ ಧ್ವನಿ ಎತ್ತಬೇಕಾಗಿದೆ. ರಿಯಲ್ ಎಸ್ಟೇಟ್, ಮಠ, ಮಾನ್ಯ, ದೇವಾಲಯಗಳಿಗಿಂತಲೂ ಮನೆಗಳು, ವ್ಯವಸಾಯಕ್ಕಾಗಿ ಭೂಮಿ ಅತಿ ಅಗತ್ಯವಿದೆ ಎಂದರು.
ನಿವೃತ್ತ ಪ್ರಾಂಶುಪಾಲ ಸಿ.ಯತಿರಾಜು ಮಾತನಾಡಿ,ಇಡೀ ಜಗತ್ತಿನ ಶೇ2.08ರಷ್ಟು ಭೂಮಿಯನ್ನು ಭಾರತ ಹೊಂದಿದೆ. ಆದರೆ ಜನಸಂಖ್ಯೆಯಲ್ಲಿ ಶೇ17ರಷ್ಟು ಭಾರತದಲ್ಲಿದೆ. ಹಾಗಾಗಿ ದೇಶದಲ್ಲಿ ಸಮಗ್ರ ಭೂ ನೀತಿ ಜಾರಿಗೆ ಬರಬೇಕಿದೆ. ಕೃಷಿ ಮತ್ತು ನಿವೇಶನಕ್ಕೆ ಮೊದಲ ಅದ್ಯತೆ ನೀಡಬೇಕಾಗಿದೆ ಎಂದರು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯಂ ಮಾತನಾಡಿ,ಸೂರಿಗಾಗಿ ಕೋಟಿ ಹೆಜ್ಜೆ ಹೋರಾಟದ ಜೊತೆ ಜೊತೆಗೆ, ಈ ಬಾರಿಯ ಚುನಾವಣೆ ಯಲ್ಲಿ ನಮಗೆ ಸೂರು, ಭೂಮಿ ನಿರಾಕರಿಸಿದವರಿಗೆ ಮತ ನೀಡುವುದಿಲ್ಲ ಎಂಬ ಸ್ಪಷ್ಟ ರಾಜಕೀಯ ಸಂದೇಶವನ್ನು ನಾವೆಲ್ಲರೂ ನೀಡಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕೃಷಿ ಕೂಲಿ ಕಾರ್ಮಿಕರ ಸಂಘಟನೆಯ ಎಸ್.ಎನ್.ಸ್ವಾಮಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್ ವಹಿಸಿದ್ದರು. ಜಿಲ್ಲಾ ಸಹಕಾರ್ಯದರ್ಶಿ ಜಿ.ಚಂದ್ರಶೇಖರ್ ಮತ್ತು ಜಿಲ್ಲಾ ಖಜಾಂಚಿ ಅಶ್ವಥನಾರಾಯಣ್ ಮತ್ತಿತರರು ವೇದಿಕೆ ಯಲ್ಲಿದ್ದರು. ಕಾರ್ಯಕ್ರಮಕ್ಕೂ ಮುನ್ನ ನೂರಾರು ಜನರು ನಗರದ ಸ್ವಾತಂತ್ರ ಚೌಕದಿಂದ ಟೌನ್ ಹಾಲ್ ವರೆಗೂ ಮರೆವಣಿಗೆ ನಡೆಸಿದರು.