Thursday, 12th December 2024

ಏಡ್ಸ್  ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ

ತುಮಕೂರು: ವಿಶ್ವ ಏಡ್ಸ್ ನಿಯಂತ್ರಣ ದಿನಾಚರಣೆ ಅಂಗವಾಗಿ ಜನರಲ್ಲಿ ಏಡ್ಸ್ ತಡೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ನಗರದಲ್ಲಿ ಜಾಥಾ ನಡೆಸಲಾಯಿತು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಆರಂಭ ವಾಗ ಏಡ್ಸ್ ಜನಜಾಗೃತಿ ಜಾಥಾಕ್ಕೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಸಿಇಓ ಡಾ. ಕೆ. ವಿದ್ಯಾಕುಮಾರಿ ಅವರು, ಸಾರ್ವಜನಿಕರಲ್ಲಿ ಏಡ್ಸ್ ಬಗ್ಗೆ ಅರಿವು ಮೂಡಿಸುವ ಉದ್ದೇಶ ದಿಂದ ಜಿ.ಪಂ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾನೂನು ಸೇವಾ ಪ್ರಾಧಿಕಾರದಿಂದ ಜಾಗೃತಿ ಜಾಥಾ ಹಮ್ಮಿಕೊಳ್ಳ ಲಾಗಿದೆ ಎಂದರು.
ನಾವು ನಿಮ್ಮ ಬೆಂಬಲಕ್ಕೆ ಇದ್ದೇವೆ. ಯಾರು ಸಹ ಹೆದರಬಾರದು, ಈ ಕಾಯಿಲೆಗೆ ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಬೇಕು. ಬದುಕು ಎಲ್ಲರಿಗೂ ಬಹು ಮುಖ್ಯ. ಬದುಕಿ ಜೀವಿಸಬೇಕು ಎಂಬ ಉದ್ದೇಶದಿಂದ ಈ ಜಾಥಾ ಕೈಗೊಳ್ಳಲಾಗಿದೆ ಎಂದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಸನತ್‌ಕುಮಾರ್ ಮಾತನಾಡಿ, ಏಡ್ಸ್ ಬಾಧಿತ ಬೆನ್ನೆಲುಬಾಗಿ ನಿಲ್ಲುತ್ತೇವೆ, ನಾವು ನಿಮ್ಮ ಬೆಂಬಲಕ್ಕೆ ಇದ್ದೇವೆ ಎಂಬುದನ್ನು ಘೋಷಣೆ ಮೂಲಕ ಸಾರುವುದು ಈ ಏಡ್ಸ್ ದಿನಾ ಚರಣೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಮಾರಕ ರೋಗದಿಂದ ಆಗುವ ಅನಾನುಕೂಲಗಳು, ತೊಂದರೆಗಳ ಬಗ್ಗೆ ವ್ಯಾಪಕ ಪ್ರಚಾರ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿ ಈ ಮಾರಕ ರೋಗದ ಪ್ರಮಾಣವನ್ನು ಶೂನ್ಯಕ್ಕೆ ತರುವ ಸಂಕಲ್ಪ ಮಾಡಲಾಗಿದೆ. ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ವೈರಸ್ ಹರಡುವುದನ್ನು ತಡೆಗಟ್ಟಿದರೆ ಏಡ್ಸ್ ಮಾರಕ ರೋಗವನ್ನು ತಡೆಗಟ್ಟಬಹುದಾಗಿದೆ ಎಂದರು.
ನಂತರ ಈ ಜಾಥಾವು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಏಡ್ಸ್ ಬಗ್ಗೆ ಜಾಗೃತಿ ಮೂಡಿಸಿತು.
ಜಾಥಾದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಪ್ರಭಾರ ಕಾರ್ಯದರ್ಶಿ ಇಫಾನ್, ಡಿಹೆಚ್‌ಓ ಡಾ. ಮಂಜುನಾಥ್, ಐಎಂಎ ಅಧ್ಯಕ್ಷ ಡಾ. ಚಂದ್ರಶೇಖರ್, ಎನ್‌ಜಿಓ ಸದಸ್ಯರು, ರಕ್ತನಿಧಿ ಕೇಂದ್ರದ ಪ್ರತಿನಿಧಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.