Tuesday, 10th December 2024

ಮಾ.12ರಿಂದ ಮತ ಜೋಳಿಗೆ ಯಾತ್ರೆ: ಸೊಗಡು ಶಿವಣ್ಣ

ತುಮಕೂರು: ಮಾ.12ರಿಂದ ನಗರದಲ್ಲಿ ವೋಟಿಗೊಂದು, ನೋಟಿಗೊಂದು ಜೋಳಿಗೆ ಹಿಡಿದು ಜನರ ಬಳಿಗೆ ಹೋಗಿ ಮತಯಾಚನೆ ಮಾಜಿ ಸಚಿವ ಎಸ್.ಶಿವಣ್ಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಎನ್.ಆರ್.ಕಾಲೋನಿಯಲ್ಲಿ ಗ್ರಾಮದೇವತೆ ಶ್ರೀದುರ್ಗಮ್ಮ ಮತ್ತು ಕಾಳಮ್ಮ ದೇವಿಯರಿಗೆ ಪೂಜೆ ಸಲ್ಲಿಸಿ ಜೋಳಿಗೆ ಯಾತ್ರೆ ಆರಂಭಿಸಲಾಗುವುದು. ಪ್ರಜಾಪ್ರಭುತ್ವದಲ್ಲಿ ಶಾಂತಿ ಮತ್ತು ಕಾಯಕ ಮಂತ್ರವನ್ನು ಜನರಿಗೆ ತಿಳಿಸುವ ಮೂಲಕ ಪಾರದರ್ಶಕ ಆಡಳಿತ ಕ್ಕಾಗಿ ಟಿಕೆಟ್ ನೀಡುವಂತೆ ಆಗ್ರಹಿಸಿ ಜೋಳಿಗೆ, ತಮಟೆಯೊಂದಿಗೆ ಮತ ಯಾಚನೆ ಮಾಡಲಿದ್ದೇನೆ.ಒಂದು ಜೋಳಿಗೆ ನೋಟು, ಇನ್ನೊಂದು ಜೋಳಿಗೆ ವೋಟಿಗೆ ಹಿಡಿದು ಮನೆ ಮನೆ ಬಾಗಿಲಿಗೆ ಹೋಗುವುದಾಗಿ ತಿಳಿಸಿದರು.
೨೦೧೩ರಲ್ಲಿ ಜನ ನನ್ನನ್ನು ಸೋಲಿಸಿದಾಗ, ೨೦೧೮ರಲ್ಲಿ ಪಕ್ಷದ ಹಿರಿಯರ ಮಾತಿಗೆ ಕಟ್ಟುಬಿದ್ದು ಟಿಕೆಟ್ ತ್ಯಾಗ ಮಾಡಿದ್ದೇನೆ. ಆದರೆ ಜನರಿಂದ ದೂರ ವಾಗಿಲ್ಲ. ಅಧಿಕಾರ ಇಲ್ಲದಿದ್ದರೂ ಜನಸೇವೆ ಮಾಡಿದ್ದೇನೆ. ಕೋವಿಡ್ ಸಂದರ್ಭದಲ್ಲಿ ಆನಾಥ ಶವಗಳಿಗೆ ಹೆಗಲು ಕೊಟ್ಟಿದ್ದೇನೆ. ಅವರ ಚಿತಾಭಸ್ಮವನ್ನು ಕೂಡಲ ಸಂಗಮದಲ್ಲಿ ಬಿಟ್ಟು, ಸದ್ಗತಿ ದೊರಕಿಸಿಕೊಡಲು ಪ್ರಯತಿಸಿದ್ದೇನೆ. ಜನರು ಚುನಾವಣೆಗೆ ನಿಲ್ಲುವಂತೆ ಒತ್ತಾಯ ಮಾಡುತ್ತಿದ್ದಾರೆ. ಅದಕ್ಕಾಗಿ ಟಿಕೆಟ್ ಕೇಳುತ್ತಿದ್ದೇನೆ, ಕೋವಿಡ್ ಸಂದರ್ಭದಲ್ಲಿ ಮುಸ್ಲಿಂ,ಹಿಂದೂ ಬೇಧವಿಲ್ಲದೆ ಚಿಕಿತ್ಸೆ ಕೊಡಿಸ ಲಾಗಿದೆ. ಜಾತಿ ಬೇಧವಿಲ್ಲದೆ ಅಂತಿಮ ಕ್ರಿಯೆಯನ್ನು ಮಾಡಲಾಗಿದೆ ಎಂದರು.
ಸ್ಮಾರ್ಟ್ಸಿಟಿ ಯೋಜನೆಯಡಿ ನಿರ್ಮಿಸಿರುವ ರಿಂಗ್‌ರಸ್ತೆಗೆ ಒಂದು ಕಿಲೋ ಮೀಟರ್‌ಗೆ ೧೨ ಕೋಟಿ ಖರ್ಚಾಗಿದೆ. ನಮ್ಮ ಕಾಲದಲ್ಲಿ ರಸ್ತೆಯನ್ನು ನಿರ್ಮಿಸ ಲಾಗಿತ್ತು. ಭೂಸ್ವಾಧೀನವಿಲ್ಲ. ದೊಡ್ಡ ದೊಡ್ಡ ಸೇತುವೆ ಇಲ್ಲ. ಹಾಗಿದ್ದರೂ ಕಿ.ಲೋ.ಮೀಟರ್ ೧೨ ಕೋಟಿ ಎಂದರೆ ಇದು ಯಾವ ರೀತಿ ರಸ್ತೆ ಎಂಬುದನ್ನು ಜನತೆ ತೀರ್ಮಾನಿಸಬೇಕಿದೆ.ಹಾಗಾಗಿಯೇ ಜನರಿಗೆ ಮೋಸ ಮಾಡವವರ ವಿರುದ್ದ ಜೋಳಿಗೆ ಹಿಡಿದು ಹೊರಟಿದ್ದೇನೆ,ಒಂದು ಕಡೆ ಸೀರೆ ಕುಕ್ಕರ್ ಹಂಚುತ್ತಾರೆ, ಇನ್ನೊಂದು ಗುಂಡು ತುಂಡು ಎನ್ನುತ್ತಾರೆ ನಾಚಿಗೆಯಾಗುವುದಿಲ್ಲವೇ ಅವರಿಗೆ ಎಂದು ಪ್ರಶ್ನಿಸಿ ದರು.
ದಲಿತ ಮುಖಂಡ ನರಸಿಂಹಯ್ಯ ಮಾತನಾಡಿ, ನಗರದಲ್ಲಿ ದಲಿತರ ಪರ ಅಭಿವೃದ್ಧಿಗಳು ನಡೆದಿದ್ದರೆ ಅದಕ್ಕೆ ಸೊಗಡು ಶಿವಣ್ಣ ಕಾರಣ,ದಲಿತರೊಂದಿಗೆ ಉತ್ತಮ ಸಂಬಂಧ,ಕಾಳಜಿಯುಳ್ಳ ಸೊಗಡು ಶಿವಣ್ಣ ಅವರ ಪ್ರಚಾರ ಕಾರ್ಯವನ್ನು ಎನ್.ಆರ್.ಕಾಲೋನಿಯಿಂದಲೇ ಪ್ರಾರಂಭಿಸಲಾಗುವುದು. ಎನ್.ಆರ್.ಕಾಲೋನಿಯ ಜನರಿಂದಲೇ ಸೊಗಡು ಶಿವಣ್ಣ ಅವರ ಠೇವಣಿಗೆ ಹಣ ಸಂಗ್ರಹಿಸಿ ಕೊಡಲಾಗುವುದು, ದುರ್ಗಮ್ಮ, ಪೂಜಮ್ಮ ದೇಗುಲದಲ್ಲಿ ಪೂಜೆ ಸಲ್ಲಿಸಿ,  ಪ್ರಚಾರ ಕಾರ್ಯ ಆರಂಭವಾಗಲಿದ್ದು, ಎನ್.ಆರ್.ಕಾಲೋನಿಯ ಎಲ್ಲ ಬೀದಿಗಳಿಗೂ ತೆರಳಿ ಮತಯಾಚನೆ ಮಾಡುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನರಸಿಂಹಯ್ಯ, ಶಾಂತರಾಜು, ರಂಗನಾಯ್ಕ್, ಜಯಸಿಂಹ, ಶಬ್ಬೀರ್ ಅಹಮದ್, ಗೋವಿಂದರಾಜು, ಕೆ.ಪಿ.ಮಮತಾ, ಗೋಕುಲ್ ಮಂಜುನಾಥ್ ಇತರರಿದ್ದರು.