ತುಮಕೂರು: ಕಾಂಗ್ರೆಸ್ 5 ಗ್ಯಾರಂಟಿ ಯೋಜನೆಯನ್ನು ಯಾವುದೇ ಷರತ್ತುಗಳಿಲ್ಲದೆ ಜಾರಿಗೊಳಿಸಬೇಕು. ಇಲ್ಲದಿದ್ದರೆ ಜಿಲ್ಲೆ ಯಿಂದಲೇ ಬೀದಿಗಳಿದು ಸರಕಾರದ ವಿರುದ್ಧ ಹೋರಾಟ ಪ್ರಾರಂಭಿಸಲಾಗುವುದು ಎಂದು ಗ್ರಾಮಾಂತರ ಶಾಸಕ ಬಿ. ಸುರೇಶ್ ಗೌಡ ಎಚ್ಚರಿಕೆ ನೀಡಿದರು.
ನಗರದ ತಾಲ್ಲೂಕು ಪಂಚಾಯ್ತಿ ಆವರಣದಲ್ಲಿ ಗ್ರಾಮಾಂತರ ಕ್ಷೇತ್ರದ ಶಾಸಕರ ಕಚೇರಿ ಯನ್ನು ವಿಶೇಷ ಪೂಜೆ ನೆರವೇರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣೆಗೂ ಮುನ್ನ ರಾಜ್ಯದ ಜನರಿಗೆ 5 ಗ್ಯಾರಂಟಿ ಯೋಜನೆಗಳಲ್ಲಿ ಷರತ್ತು ಗಳನ್ನು ಹಾಕುವ ಧಮ್ ಇವರಿಗೆ ಇರಲಿಲ್ಲವೇ, ಗೆದ್ದ ಬಳಿಕ ಷರತ್ತು ಎಂದು ಹೇಳುವುದು ಎಷ್ಟು ಸರಿ. ಕೊಟ್ಟ ಮಾತು ತಪ್ಪಿದರೆ ಸರ್ಕಾರ ಎಚ್ಚೆತ್ತುಕೊಳ್ಳುವವರೆಗೂ ಹೋರಾಟ ಮಾಡುತ್ತೇವೆ ಎಂದರು.
ಚುನಾವಣಾ ಪ್ರಚಾರದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉಚಿತ ಯೋಜನೆ ಗಳ ಕುರಿತು ನನಗೂ ಫ್ರೀ, ನಿಮಗೂ ಫ್ರೀ ಎಂದು ಹೇಳಿದ್ದಾರೆ. ಹಾಗಾಗಿ ಒಂದು ತಿಂಗಳಲ್ಲಿ ಎಲ್ಲ ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪ್ರಯಾಣ ನೀಡಲೇಬೇಕು. 200 ಯೂನಿಟ್ ಉಚಿತವಾಗಿ ಎಲ್ಲರಿಗೂ ಕೊಡಬೇಕು. ನನಗೂ ಕೊಡಬೇಕು, ಬಡವರಿಗೂ ಕೊಡಬೇಕು ಎಂದು ಆಗ್ರಹಿಸಿದರು.
ಅಭಿವೃದ್ಧಿ ನನ್ನ ಗುರಿ
ಕ್ಷೇತ್ರದ ಜನರಿಗಾಗಿ ಶಾಸಕರ ನೂತನ ಕಚೇರಿ ಉದ್ಘಾಟಿಸಲಾಗಿದೆ. ಈ ಕಚೇರಿ ರಜಾ ದಿನಗಳನ್ನು ಹೊರುತಪಡಿಸಿ ನಿರಂತರವಾಗಿ ಕೆಲಸ ತೆಗೆದಿರುತ್ತದೆ. ಸಾಮರಸ್ಯ, ಸಹಬಾಳ್ವೆ, ಅಭಿವೃದ್ಧಿ ಮಂತ್ರದೊಂದಿಗೆ 5 ವರ್ಷಗಳ ಕಾಲ ಕೆಲಸ ಮಾಡುವುದು ತಮ್ಮ ಇರಾದೆಯಾಗಿದೆ ಎಂದರು.
ಕ್ಷೇತ್ರದಲ್ಲಿ ಆಸ್ಪತ್ರೆ, ನೀರಾವರಿ, ಬಡವರಿಗೆ ಮನೆಗಳ ನಿರ್ಮಾಣ, ಉತ್ತಮ ರಸ್ತೆ, ನೆನೆಗುದಿಗೆ ಬಿದ್ದಿರುವ ದೇವಸ್ಥಾನ, ಹೆತ್ತೇನಹಳ್ಲಿ ಮಾರಮ್ಮನ ದೇಗುಲ, ಬೈಲಾಂಜನೇಯ ದೇವಾಲಯಗಳನ್ನು ಕಾಲಮಿತಿಯಲ್ಲಿ ಸಂಪೂರ್ಣಗೊಳಿಸಲು ನಿರ್ಣಯಿಸಲಾಗಿದೆ ಎಂದರು.
ನಮ್ಮ ಕ್ಷೇತ್ರಕ್ಕೆ ಬಡವರಿಗೆ ಸಾಕಷ್ಟು ಮನೆಗಳು ಬಂದಿಲ್ಲ. ಈ ಬಗ್ಗೆಯೂ ಗಮನ ಹರಿಸಿ ಬಡವರಿಗೆ ಸೂರು ಕಲ್ಪಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ವೈ.ಹೆಚ್. ಹುಚ್ಚಯ್ಯ, ಡಿ.ಎನ್. ಶಂಕರ್, ವಿಜಯಕುಮಾರ್, ಸಿದ್ದೇಗೌಡ, ಮೈದಾಳ ಮಂಜುನಾಥ್, ಮಾಯರಂಗಯ್ಯ, ರಂಗನಾಥಪ್ಪ ಮತ್ತಿತರರು ಭಾಗವಹಿಸಿದ್ದರು.