ತುಮಕೂರು: ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಪಡೆಯಲು ಹಾಲಿ ಶಾಸಕ ಜ್ಯೋತಿಗಣೇಶ್ ಮತ್ತು ಮಾಜಿ ಸಚಿವ ಸೊಗಡು ಶಿವಣ್ಣ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಈ ಮಧ್ಯೆ ಟಿಎಂಸಿಸಿ ಬ್ಯಾಂಕ್ ಅಧ್ಯಕ್ಷ, ಎನ್.ಎಸ್ ಜಯ ಕುಮಾರ್ ಅವರು ಬಿಜೆಪಿ ಮುಖಂಡ ಬಿ.ಎಲ್.ಸಂತೋಷ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಬಿಜೆಪಿಯಿಂದ ಟಿಕೆಟ್ ನೀಡುವಂತೆ ಮನವಿ ಮಾಡಿರುವುದು ರಾಜಕೀಯ ತಲ್ಲಣ ಮೂಡಿಸಿದೆ.
ಬ್ಯಾಂಕ್ ಕ್ಷೇತ್ರದೊಂದಿಗೆ ಹಲವು ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿ ರುವ ಜಯಕುಮಾರ್, ನಗರ ವ್ಯಾಪ್ತಿಯಲ್ಲಿ ಒಳ್ಳೆಯ ಹಿಡಿತವಿಟ್ಟುಕೊಂಡಿದ್ದಾರೆ.
2018ರಲ್ಲಿ ಕದನಕ್ಕಿಳಿಯುವ ಬಗ್ಗೆ ಚರ್ಚೆಯಾಗಿದ್ದರೂ ದೂರ ಉಳಿದಿದ್ದರು. ಆದರೆ ಈ ಬಾರಿ ರಣರಂಗಕ್ಕಿಳಿಯಲು ಸಿದ್ಧತೆ ನಡೆಸುತ್ತಿದ್ದು, ಮೂರ್ನಾಲ್ಕು ಬಾರಿ ದೆಹಲಿಗೆ ಭೇಟಿ ನೀಡಿ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ.
ಟಿಕೆಟ್ ಪಡೆಯಲು ಫೈಟ್ ನಡೆಸುತ್ತಿರುವ ಶಾಸಕ ಜ್ಯೋತಿಗಣೇಶ್ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ಅವರ ನಡುವೆ ಜಯಕುಮಾರ್ ಅವರಿಗೆ ಟಿಕೆಟ್ ಸಿಕ್ಕಿದರೂ ಆಶ್ಚರ್ಯವಿಲ್ಲ ಎಂಬುದು ನಗರ ಕ್ಷೇತ್ರದಲ್ಲಿ ಇತ್ತೀಚೆಗೆ ತೀವ್ರ ಚರ್ಚೆಯಾಗುತ್ತಿದೆ. ಸೈಲೆಂಟ್ ಆಗಿದ್ದ ಜಯಕುಮಾರ್ ಸಿಡಿದೆದ್ದಿರುವುದು ಕುತೂಹಲ ಮೂಡಿಸಿದೆ. ಒಟ್ಟಾರೆ ನಗರ ಕ್ಷೇತ್ರದ ಬಿಜೆಪಿಪಾಳಯದ ರಣರಂಗ ದಿನೇ ದಿನೇ ರಂಗೇರುತ್ತಿದೆ.