ತುಮಕೂರು: ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಗರದಲ್ಲಿ 2-3 ಸಾವಿರ ನಿವೇಶನಗಳನ್ನು ಸಿದ್ದಪಡಿಸಿ ಜನಸಾಮಾನ್ಯರಿಗೆ ನೀಡುವಂತೆ ಟೂಡಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ತುಮಕೂರಿನಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದ ನಂತರ ಕಳೆದ 20 ವರ್ಷಗಳ ಹಿಂದೆ ನಗರದ ಕೆಲವು ಕಡೆ ಲೇಔಟ್ ನಿರ್ಮಾಣ ಮಾಡಿರುವುದನ್ನು ಹೊರತುಪಡಿಸಿದರೆ ಇನ್ನೆಲ್ಲೂ ಲೇಔಟ್ ನಿರ್ಮಾಣ ಮಾಡಿಲ್ಲ ಎಂದು ಹೇಳಿದರು.
ರಾಜಧಾನಿ ಬೆಂಗಳೂರಿಗೆ ಉಪನಗರವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ತುಮಕೂರು ನಗರಕ್ಕೆ ಮೆಟ್ರೋ ರೈಲು ತರುವ ಉದ್ದೇಶವಿದೆ. ಇಂದಲ್ಲಾ ನಾಳೆ ಈ ಯೋಜನೆ ಕಾರ್ಯಗತ ವಾಗಲಿದೆ. ಹಾಗಾಗಿ ತುಮಕೂರು ನಗರವನ್ನು ಸ್ವಚ್ಛ , ಸುಂದರವಾಗಿ ಇಡಲು ಸೂಚನೆ ನೀಡಿದ್ದೇನೆ ಎಂದರು.
ಸ್ಮಾರ್ಟ್ಸಿಟಿ ಯೋಜನೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಂಜೂರು ಮಾಡಿ ಕೊಟ್ಟಿವೆ. ಈ ಯೋಜನೆ ವ್ಯಾಪ್ತಿ ಒಳಪಟ್ಟಿರುವ ನಗರಗಳಲ್ಲಿ ತುಮಕೂರು ಕೂಡ ಒಂದು. ಈ ಯೋಜನೆ ಉದ್ದೇಶ ಆಧುನಿಕವಾದಂತಹ ನಗರ ಆಗಬೇಕು ಎಂಬುದಾಗಿದೆ. ಜನರಿಗೆ ಆಧುನಿಕ ರೀತಿಯಲ್ಲಿ ಸೌಲಭ್ಯ ದೊರಕಿಸುವ ಉದ್ದೇಶದಿಂದ ಒಂದು ಸಾವಿರ ಕೋಟಿ ರೂ. ಮಂಜೂರು ಮಾಡಲಾಗಿದೆ. ಈ ಅನುದಾನದಲ್ಲಿ ಕೇಂದ್ರ ಸರ್ಕಾರ ಶೇ. 50 ರಷ್ಟು, ರಾಜ್ಯ ಸರ್ಕಾರ ಶೇ.50 ರಷ್ಟನ್ನು ನೀಡಿದೆ ಎಂದರು.
ಕೇಂದ್ರ ಸರ್ಕಾರದಿಂದ ಈ ಯೋಜನೆಗೆ 490 ಕೋಟಿ ರು. ಹಣ ಬಿಡುಗಡೆಯಾಗಿದೆ. ಹಾಗೆಯೇ ರಾಜ್ಯ ಸರ್ಕಾರ ಕೂಡ 443 ಕೋಟಿ ರೂ.ಗಳನ್ನು ನೀಡಿದೆ. ಈ ಯೋಜನೆಯಡಿ 120 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ತುಮಕೂರು ರಿಂಗ್ ರಸ್ತೆ ಆಧುನೀಕರಣ, ವಿದ್ಯುತ್ ಲೈಟ್, ಬಸ್ ನಿಲ್ದಾಣ, ಆಧುನಿಕ ಸಾರ್ವಜನಿಕ ಗ್ರಂಥಾಲಯ ನಿರ್ಮಾಣ ಹಾಗೂ ಮಕ್ಕಳಿಗೆ ಕ್ರೀಡಾಸಕ್ತಿ ಹೆಚ್ಚಿಸಲು ಆಧುನಿಕ ಕ್ರೀಡಾಂಗಣ ನಿರ್ಮಿಸಲಾಗಿದೆ. ಈಗಾಗಲೇ ಶೇ. 90 ರಷ್ಟು ಕೆಲಸ ಮುಗಿದಿದ್ದು, ಶೇ. 10 ರಷ್ಟು ಕೆಲಸ ಮಾತ್ರ ಬಾಕಿ ಉಳಿದಿದ್ದು, ಈ ಕಾರ್ಯವೂ ನಡೆಯುತ್ತಿದೆ ಎಂದರು.
ನಗರದ ಮಹಾತ್ಮಗಾಂಧಿ ಕ್ರೀಡಾಂಗಣ ನವೀಕರಣ ಕಾಮಗಾರಿ ಸಂಪೂರ್ಣ ಆಗಿದೆ. ಒಂದು ಭಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.
ನಗರದಲ್ಲಿ ನಡೆದಿರುವ ಸ್ಮಾರ್ಟ್ಸಿಟಿ ಯೋಜನೆ ಸ್ಥಳಗಳಿಗೆ ತಾವೇ ಖುದ್ಧು ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ತಿಳಿಸಿದ ಅವರು, ಅಮಾನಿಕೆರೆಗೆ ಗಲೀಜು ನೀರು ಹೋಗುವುದನ್ನು ತಪ್ಪಿಸಬೇಕು. ಕೆರೆ ಶುದ್ದೀಕರಣ ಮಾಡಿ ಅಮಾನಿಕೆರೆಯಲ್ಲಿ ಕುಡಿಯುವ ನೀರಿಗೆ ಸ್ಟೋರೇಜ್ ಮಾಡುವ ವ್ಯವಸ್ಥೆ ಕೈಗೊಳ್ಳುವಂತೆ ತಿಳಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಸ್ಮಾರ್ಟ್ಸಿಟಿ ವ್ಯವಸ್ಥಾಪಕ ನಿರ್ದೇಶಕ ರಂಗಸ್ವಾಮಿ, ಟೂಡಾ ಆಯುಕ್ತ ಗೋಪಾಲ್ ಜಾಧವ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಹೇಮಲತ ಸೇರಿದಂತೆ ಇಂಜಿನಿಯರ್‌ಗಳು, ಅಧಿಕಾರಿಗಳು ಭಾಗವಹಿಸಿದ್ದರು.