Tuesday, 10th December 2024

ಕೊಬ್ಬರಿಗೆ 20 ಸಾವಿರ ಬೆಂಬಲ ಬೆಲೆ ನೀಡಲು ರೈತಸಂಘ ಆಗ್ರಹ

ತುಮಕೂರು:ಕೊಬ್ಬರಿಗೆ ಕ್ವಿಂಟಾಲ್‌ಗೆ 20 ಸಾವಿರ ಕನಿಷ್ಠ ಬೆಂಬಲ ಬೆಲೆ ನೀಡಬೇಕು. ರೈತರಿಗೆ ಕನಿಷ್ಠ 8 ಗಂಟೆಗಳ ಕಾಲ ತ್ರಿಪೇಸ್ ವಿದ್ಯುತ್ ಸರಬರಾಜು ಮಾಡಬೇಕು ಹಾಗೂ ಕೃಷಿ ಪೂರಕ ವಸ್ತುಗಳ ಬೆಲೆಗಳ ಹೆಚ್ಚಳವನ್ನು ಕಡಿತಗೊಳಿಸ ಬೇಕೆಂದು ಆಗ್ರಹಿಸಿ ಕರ್ನಾ ಟಕ ರಾಜ್ಯ ರೈತ ಸಂಘ ತುಮಕೂರು ಜಿಲ್ಲಾ ಘಟಕದವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
 ರೈತ ಸಂಘದ  ನೇತೃತ್ವದಲ್ಲಿ ನೂರಾರು ರೈತರು ನಗರದ ಟೌನ್‌ಹಾಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯ ವರಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಡಿಸೀ ಕಚೇರಿ ಬಳಿ ಸಮಾವೇಶಗೊಂಡರು.ಈ ವೇಳೆ ಸರಕಾರ ಕೂಡಲೇ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ 20 ಸಾವಿರ ರೂಗಳನ್ನು ನೀಡಬೇಕು,ರೈತರ ಪಂಪಸೆಟ್‌ಗಳಿಗೆ ದಿನದ 8 ಗಂಟೆಗಳ ಕಾಲ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕೆಂದು ಘೋಷಣೆ ಕೂಗಿದರು.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರಪ್ಪ,ಇಂದು ಇಡೀ ರಾಜ್ಯದಲ್ಲಿ ಕೊಬ್ಬರಿ,ತೊಗರಿ, ಭತ್ತ,ಕಬ್ಬು,ಅಡಿಕೆ,ರಾಗಿ ಸೇರಿದಂತೆ ಕೃಷಿ ಉತ್ಪನ್ನಗಳ ಬೆಲೆ ಕುಸಿದಿದೆ. ಸರಕಾರವೇ ನಿಗದಿ ಪಡಿಸಿದ ಬೆಂಬಲ ಬೆಲೆಗಿಂತಲೂ ಅತಿ ಕಡಿಮೆ ಬೆಲೆಗೆ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದರೂ ಸರಕಾರ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದರು.
ರೈತ ಸಂಘ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ,ರಾಜ್ಯದ 13ಜಿಲ್ಲೆಗಳಲ್ಲಿ ಕೊಬ್ಬರಿಯನ್ನು ಉತ್ಪಾಧಿಸಲಾಗುತ್ತದೆ. ಅದರಲ್ಲಿ ತುಮಕೂರು ಜಿಲ್ಲೆ ನಂಬರ್ ಒನ್ ಸ್ಥಾನದಲ್ಲಿದೆ.2022ರಲ್ಲಿ ಒಂದು ಕ್ವಿಂಟಾಲ್ ಕೊಬ್ಬರಿ ಬೆಲೆ 18 ಸಾವಿರ ರು. ಇದ್ದು, ಪ್ರಸ್ತುತ ಅದು 8 ಸಾವಿರ ರೂ ಗಳಿಗೆ ಕುಸಿದಿದೆ.ಇದಕ್ಕೆ ಕೇಂದ್ರ ಸರಕಾರದ ಆಮದು ನೀತಿಯೇ ಕಾರಣ.ಚುನಾವಣಾ ದೃಷ್ಟಿಯಿಂದ ಅಮದು ಸುಂಕ ಕಡಿತಗೊಳಿಸಿದ ಕಾರಣ. ದಿನದ ಕನಿಷ್ಠ 8 ಗಂಟೆ ಕಾಲ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕೆಂಬುದು ರೈತ ಸಂಘದ ಆಗ್ರಹವಾಗಿದೆ ಎಂದರು.
ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನೂಲೆನೂರು ಶಂಕರಪ್ಪ, ಜಿಲ್ಲಾ ಪದಾಧಿಕಾರಿಗಳಾದ ಜಿ.ಸಿ.ಶಂಕರಪ್ಪ, ದೊಡ್ಡಮಾಳಯ್ಯ, ರವೀಶ್, ಯುವಘಟಕದ ಚಿರತೆ ಚಿಕ್ಕಣ್ಣ, ವಿವಿಧ ತಾಲೂಕು ಗಳ ಪದಾಧಿಕಾರಿಗಳಾದ ಕೆ.ಎನ್.ವೆಂಕಟೇಗೌಡ, ಸಿ.ಜಿ.ಲೋಕೇಶ್, ಭಾಗ್ಯಮ್ಮ, ಚಿಕ್ಕಬೋರೇಗೌಡ, ರಂಗಸ್ವಾಮಯ್ಯ, ಕೃಷ್ಣಪ್ಪ, ಡಿ.ಕೆ.ರಾಜು, ಪೂಜಾ ರಪ್ಪ, ರಂಗಹನುಮಯ್ಯ, ಶಬ್ಬೀರ್ ಪಾಷ ಪಾಲ್ಗೊಂಡಿದ್ದರು.