ತಿಪಟೂರು: ಮತ್ತಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಕ್ರಿಯೆ ಯಲ್ಲಿ ಭಾಗಿಯಾಗುವ ವಿಶೇಷ ಚೇತನ ಹಾಗೂ ಶತಾಯುಷಿ ಮತದಾರರಿಗೆ “ಆಮಂತ್ರಣ ಅಭಿಯಾನ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ತಿಪಟೂರು ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎಚ್. ಎಮ್. ಸುದರ್ಶನ್ ಉದ್ಘಾಟಿಸಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣಾ ಪ್ರಕ್ರಿಯೆಗೆ ಬಹಳ ಮಹತ್ವವಿದ್ದು ಚುನಾವಣೆಯಲ್ಲಿ ವಿಶೇಷ ಚೇತನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು ಎಂದು ತಿಳಿಸಿ ಚುನಾವಣಾ ಆಯೋಗವು ಈ ಬಾರಿಯೂ ಎಲ್ಲಾ ಮತದಾರರಿಗೆ “ಮತದಾರ ಸ್ನೇಹಿ” ಕಾರ್ಯಕ್ರಮಗಳನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸ್ವೀಪ್ ಸಮಿತಿ ತುಮಕೂರು ಜಿಲ್ಲೆ ಇವರು ವಿಶೇಷ ಮುತುವರ್ಜಿ ವಹಿಸಲಿದೆ. ತಾವುಗಳು ಆತ್ಮವಿಶ್ವಾಸದಿಂದ ಮತದಾನ ಮಾಡಬೇಕೆಂದು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸ ಲಾಗಿದ್ದು ಈ ಸೌಲಭ್ಯಗಳನ್ನು ವಿಶೇಷ ಚೇತನರು ಹಾಗೂ ಶತಾಯುಷಿಗಳು ಕಡ್ಡಾಯವಾಗಿ ಪಡೆದುಕೊಳ್ಳಬೇಕೆಂದು ತಿಳಿಸಿದರು.
ವಿಶೇಷ ಮತಗಟ್ಟೆ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಓಡಾಟಕ್ಕೆ ವಿಶೇಷ ವಾಹನ, ಗಾಲಿ ಕುರ್ಚಿಗಳ ವ್ಯವಸ್ಥೆ, ಇಳಿಜಾರು ವ್ಯವಸ್ಥೆ ಹಾಗೂ ವಿಶೇಷ ಚೇತನರಿಗೆ ಪ್ರತ್ಯೇಕ ಸರತಿ ಸಾಲಿನ ವ್ಯವಸ್ಥೆ ಮತ್ತು ವಿಶ್ರಾಂತಿ ಕೊಠಡಿ ಮಾಡ ಲಾಗಿದ್ದು ಇದರ ಸದುಪಯೋಗಪಡಿಸಿಕೊಳ್ಳಲು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ. ಟಿ.ಅಶೋಕ್ ಮಾತನಾಡಿ ಮೇ ೧೦ ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ತಾವುಗಳು ತಪ್ಪದೆ ಪಾಲ್ಗೊಂಡು ಕಡ್ಡಾಯವಾಗಿ ಮತ ದಾನ ಮಾಡಿ ಮತದಾನದ ಪ್ರಮಾಣ ಹೆಚ್ಚಿಸುವ ಮೂಲಕ ಸದೃಢ ಹಾಗೂ ಮಾದರಿ ನಾಡು ನಿರ್ಮಾಣ ಮಾಡಲು ಎಲ್ಲರೂ ಸಹಕರಿಸುವಂತೆ ತಿಳಿಸಿದರು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಸ್. ಗೋಪಾಲಪ್ಪ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಜಿ.ಎಂ. ವಿಜಿಯಣ್ಣ, ಮೇಲ್ವಿಚಾರಕಿ ಬಿ.ಎನ್. ಪ್ರೇಮ, ಗ್ರಾಮಲೆಕ್ಕಿಗರಾದ ಅರಳಿತ, ವಿ.ಆರ್. ಡಬ್ಲ್ಯೂ. ಸುಶೀಲಮ್ಮ ಬಿ.ಎಲ್. ಓ.ಲೋಕೇಶ್ ರವರು ಅಂಗನವಾಡಿ ಕಾರ್ಯಕರ್ತೆ ಕಮಲಮ್ಮ ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳು ವಿಶೇಷ ಚೇತನರು ಶತಾಯುಷಿಗಳು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.