Friday, 13th December 2024

ತುಮಕೂರು ನಗರ:ಸೊಗಡು ಬಂಡಾಯ ಸ್ಪರ್ಧೆ

ತುಮಕೂರು: ಬಿಜೆಪಿ ಟಿಕೆಟ್ ನೀಡದೆ ಮೋಸ ಮಾಡಿದ್ದರಿಂದ ಸಿಡಿದೆದ್ದಿರುವ ಮಾಜಿ ಸಚಿವ ಸೊಗಡು ಶಿವಣ್ಣ ಅವರು ತುಮಕೂರು ನಗರ ವಿಧಾನಸಭಾ ಕ್ಷೇತ್ರದಿಂದ ಬಂಡಯವಾಗಿ ಕಣಕ್ಕಿಳಿಯಲಿದ್ದಾರೆ.
ಬುಧವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಲಿದ್ದು ಏ.20ರಂದು ಅಪಾರ ಬೆಂಬಲಿಗ ರೊಂದಿಗೆ ಉಮೇದುವಾರಿಕೆ ಸಲ್ಲಿಸುವರು.
ಪತ್ರಿಕೆಯೊಂದಿಗೆ ಮಾತನಾಡಿದ ಸೊಗಡು ಶಿವಣ್ಣ, ನಾಲ್ಕು ಬಾರಿ ಶಾಸಕನಾಗಿ, ಎರಡು ಬಾರಿ ಸಚಿವನಾಗಿ ನಗರ ಅಭಿವೃದ್ಧಿ ಮಾಡಲಾಗಿದೆ. ಟಿಕೆಟ್ ತಪ್ಪಿಸಿರುವ ಮಹಾಶಯರು ಚೆನ್ನಾಗಿರಲಿ. ಈ ಬಾರಿ ಕಣದಿಂದ ಹಿಂದೆ ಸರಿಯುವುದಿಲ್ಲ. ಬಂಡಾಯ ವಾಗಿ ಕಣಕ್ಕಿಳಿ ಯುತ್ತಿದ್ದೇನೆ. ಎಲ್ಲದಕ್ಕೂ ಮತದಾರರೇ ಉತ್ತರ ನೀಡುವರು ಎಂದರು.
ಚುನಾವಣೆಯಲ್ಲಿ ಮತವನ್ನು ಖರೀದಿ ಮಾಡುವುದಿಲ್ಲ. ಜೋಳಿಗೆ ಹಿಡಿದು ಮತ ಭಿಕ್ಷೆ ಕೇಳುತ್ತಿದ್ದೇನೆ. ನಗರದ ಮತದಾರರು ಒಳ್ಳೆಯವರಿಗೆ ಆಶೀರ್ವಾದ ಮಾಡುವರು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಟಿಕೆಟ್ ಬಗ್ಗೆ ಉದಾರತೆ ತೋರಿದ ಸೊಗಡು
ಬಿಜೆಪಿಯಿಂದ ಟಿಕೆಟ್ ದೊರೆಯದಿದ್ದರಿಂದ ಮಾಜಿ ಸಚಿವ ಸೊಗಡು ಶಿವಣ್ಣ ಅವರನ್ನು ಜೆಡಿಎಸ್ ಪಕ್ಷದಿಂದ ಕಣಕ್ಕಿಳಿಸಲು ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಲಾಗಿತ್ತು. ಪಂಚರತ್ನ ಯಾತ್ರೆ ನಗರಕ್ಕೆ ಆಗಮಿಸಿದ್ದ ವೇಳೆ ಜೆಡಿಎಸ್ ಅಭ್ಯರ್ಥಿಯಾಗಿ ಗೋವಿಂದರಾಜು ಹೆಸರನ್ನು ಅಂತಿಮಗೊಳಿಸಲಾಗಿದೆ. ಈಗಾಗಲೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಗೋವಿಂದರಾಜುಗೆ ಟಿಕೆಟ್ ತಪ್ಪಿಸಿ ನನಗೆ ನೀಡಬೇಡಿ, ಬಂಡಾಯವಾಗಿ ಕಣಕ್ಕಿಳಿಯುತ್ತೇನೆ ಎಂದು ಸೊಗಡು ಶಿವಣ್ಣ ಅವರು ದೇವೇಗೌಡರಿಗೆ ತಿಳಿಸುವ ಮೂಲಕ ಉದಾರತೆ ತೋರಿದ್ದಾರೆ.2018ರಲ್ಲಿ ಜೆಡಿಎಸ್ ಪಕ್ಷಕ್ಕೆ ಕರೆಯ ಲಾಗಿತ್ತು. ನೀವು ಬಂದಿದ್ದರೆ ದಳಕ್ಕೆ ಇನ್ನೂ ಹೆಚ್ಚಿನ ಶಕ್ತಿ ಬರುತ್ತಿತ್ತು. ನೀವು ದಳಕ್ಕೆ ಬರುವುದಾದರೆ ಹೃದಯಪೂರ್ವಕವಾಗಿ ಸ್ವಾಗತಿಸಲಾಗಿವುದು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಶಿವಣ್ಣ ಅವರಿಗೆ ತಿಳಿಸಿದ್ದಾರೆ.