Tuesday, 24th September 2024

Tumkur News: ತುಮಕೂರು ಜಿಲ್ಲಾಡಳಿತದಿಂದ ದಸರಾ ಉತ್ಸವ ಸಮಿತಿ ಕಡೆಗಣನೆ: ಜಿ.ಎಸ್. ಬಸವರಾಜು ಆರೋಪ

Tumkur News

ತುಮಕೂರು: ಕಳೆದ 33 ವರ್ಷಗಳಿಂದ ತುಮಕೂರು ನಗರದಲ್ಲಿ (Tumkur News) ದಸರಾ ಉತ್ಸವ (Dasara utsav) ನಡೆಸಿಕೊಂಡು ಬರುತ್ತಿದ್ದ ದಸರಾ ಸಮಿತಿಯನ್ನು ಜಿಲ್ಲಾಡಳಿತ ನಡೆಸುವ ಸರ್ಕಾರಿ ದಸರಾ ಉತ್ಸವ ಸಮಿತಿ ಕಡೆಗಣಿಸಿದ್ದರ ಹಿನ್ನೆಲೆಯಲ್ಲಿ ನಗರದ ಶ್ರೀರಾಮಮಂದಿರದ ಆವರಣದಲ್ಲಿ 10 ದಿನಗಳ ಕಾಲ ದಸರಾ ಉತ್ಸವದ ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಧಿ ವಿಧಾನಗಳು ನಡೆಯಲಿವೆ ಎಂದು ದಸರಾ ಉತ್ಸವ ಸಮಿತಿಯ ಖಜಾಂಚಿ ಜಿ.ಎಸ್. ಬಸವರಾಜು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 33 ವರ್ಷಗಳಿಂದ ದಸರಾ ಉತ್ಸವ ಸಮಿತಿ ಪ್ರತಿವರ್ಷ ಒಂದೊಂದು ಸಮುದಾಯ ಸ್ವಾಮೀಜಿಗಳ ನೇತೃತ್ವದಲ್ಲಿ ಶೋಭಾಯಾತ್ರೆ ಮತ್ತು ಸಾಂಸ್ಕೃತಿಕ ಉತ್ಸವಗಳನ್ನು ನಡೆಸಿಕೊಂಡು ಬರಲಾಗುತ್ತಿತ್ತು. ಆದರೆ ಈ ಬಾರಿ ಜಿಲ್ಲಾಡಳಿತವೇ ದಸರಾ ಉತ್ಸವವನ್ನು ಸರ್ಕಾರಿ ಉತ್ಸವವಾಗಿ ಆಚರಿಸಲು ಮುಂದಾದಾಗ ನಾವುಗಳು ಸಹ ಸ್ವಾಗತಿಸಿ, ಅವರೊಂದಿಗೆ ಸಹಕರಿಸಲು ಮುಂದಾಗಿದ್ದೆವು. ಆದರೆ ಜಿಲ್ಲಾಡಳಿತ ನಮ್ಮನ್ನು ಕಡೆಗಣಿಸಿ, ಸರ್ಕಾರದ ಅನುದಾನದಲ್ಲಿ ಒಂದು ಪಕ್ಷದ ಕಾರ್ಯಕ್ರಮವಾಗಿ ಕಾರ್ಯಕ್ರಮ ರೂಪಿಸಿದೆ. ಈ ಹಿನ್ನೆಲೆಯಲ್ಲಿ ಎಂದಿನಂತೆ ದಸರಾ ಸಮಿತಿ ಶೋಭಾಯಾತ್ರೆಯನ್ನು ಕೈಬಿಟ್ಟು, ಬನ್ನಿಪೂಜೆ, ಸಾಮೂಹಿಕ ಶಮಿ ಪೂಜೆ ಸೇರಿದಂತೆ ಎಲ್ಲಾ ವಿಧಿ, ವಿಧಾನಗಳನ್ನು ಶ್ರೀರಾಮಮಂದಿರದ ಆವರಣದಲ್ಲಿ ಕೈಗೊಳ್ಳಲಿದ್ದೇವೆ ಎಂದರು.

ಈ ಸುದ್ದಿಯನ್ನೂ ಓದಿ | EV Motorcycle: ಯೂರೋಪ್ ದೇಶಗಳಿಗೆ ರಫ್ತಾಗುತ್ತಿದೆ ದೇಶದ ಮೊದಲ ʼಇವಿ ಮೋಟಾರ್ ಸೈಕಲ್ʼ; ಕನ್ನಡಿಗರೇ ರೂವಾರಿ!

ಜಿಲ್ಲಾಡಳಿತ ನಡೆಸುವ ದಸರಾ ಉತ್ಸವ ಸಮಿತಿಯಲ್ಲಿ ಶೇ.90 ರಷ್ಟು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೇ ಸದಸ್ಯರಾಗಿದ್ದಾರೆ. ಅಲ್ಲದೆ ಜನಸಾಮಾನ್ಯರಲ್ಲಿ ಸದಸ್ಯರಾಗಿ ಒಂದೇ ಪಕ್ಷದ ವ್ಯಕ್ತಿಗಳನ್ನು ಸದಸ್ಯರಾಗಿ ನೇಮಕ ಮಾಡಿದ್ದಾರೆ ಎಂದು ಆರೋಪಿಸಿದ ಅವರು, ಅಲ್ಲದೆ ಸಾಮೂಹಿಕ ಶಮಿ ಪೂಜೆ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಶಮಿ ಪೂಜೆ ಎಂಬುದು ಹಿಂದುಗಳಿಗೆ ಸೇರಿದ್ದು. ಕಳೆದ 33 ವರ್ಷಗಳಿಂದ ಜಿಲ್ಲಾಡಳಿತಕ್ಕೆ ಅನುದಾನಕ್ಕಾಗಿ ಮನವಿ ಮಾಡುತ್ತಲೇ ಬಂದಿದ್ದೇವೆ. ಆದರೆ ಒಂದು ನಯಾ ಪೈಸೆ ನೀಡಿಲ್ಲ. ಆದರೆ ಈಗ ಎರಡು ಕೋಟಿ ಅನುದಾನ ನೀಡಲು ಮುಂದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ದಸರಾ ಉತ್ಸವ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್ ಮಾತನಾಡಿ, ಕಳೆದ 33 ವರ್ಷಗಳಿಂದ ನಡೆಸಿಕೊಂಡು ಬಂದ ರೀತಿಯಲ್ಲಿಯೇ ಈ ಬಾರಿಯೂ ದಸರಾ ಉತ್ಸವ ನಡೆಸಲು ನಾವು ಸಿದ್ದತೆ ಮಾಡಿಕೊಂಡು ಹಲವಾರು ಸಮಿತಿಗಳನ್ನು ರಚಿಸಿ ಕಾರ್ಯೋನ್ಮುಖವಾಗಿ, ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ನೀಡುವಂತೆ ಕೋರಿದ್ದೇವು. ಆದರೆ ಮನವಿ ನೀಡಿ ಮೂರು ತಿಂಗಳು ಕಳೆದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಹಿಂಬರಹವನ್ನು ನೀಡಿಲ್ಲ. ಜಿಲ್ಲಾಡಳಿತ ನಡೆಸುವ ಉತ್ಸವಕ್ಕೆ ನಮ್ಮ ಬೆಂಬಲವಿದೆ. ಆದರೆ ಧಾರ್ಮಿಕ ವಿಧಿ ವಿಧಾನಗಳ ಶಾಸ್ತ್ರೋಕ್ತವಾಗಿ ನಡೆಯಬೇಕೆಂಬ ಕಾರಣಕ್ಕೆ ಶ್ರೀರಾಮಮಂದಿರದ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸುತ್ತಿರುವುದಾಗಿ ತಿಳಿಸಿದರು.

ದಸರಾ ಉತ್ಸವ ಸಮಿತಿ ವತಿಯಿಂದ ಶ್ರೀರಾಮನಗರದ ಆವರಣದಲ್ಲಿ ಅಕ್ಟೋಬರ್ 03 ರಿಂದ 13 ರವರೆಗೆ ಕಾರ್ಯಕ್ರಮಗಳು ಜರುಗಲಿವೆ. ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ಎಂದಿನಂತೆ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಈ ಸುದ್ದಿಯನ್ನೂ ಓದಿ | Beauty Parlor Training: ನಿರುದ್ಯೋಗಿ ಯುವತಿಯರಿಗೆ ಗುಡ್‌ ನ್ಯೂಸ್‌; ಬ್ಯೂಟಿ ಪಾರ್ಲರ್ ಉಚಿತ ತರಬೇತಿಗೆ ಅರ್ಜಿ ಆಹ್ವಾನ

ಸುದ್ದಿಗೋಷ್ಠಿಯಲ್ಲಿ ಶಾಸಕ ಜಿ.ಬಿ.ಜೋತಿಗಣೇಶ್, ದಸರಾ ಉತ್ಸವ ಸಮಿತಿಯ ಡಾ. ಪರಮೇಶ್, ಬಿ.ಎಸ್. ಮಂಜುನಾಥ್, ಮಂಜುನಾಥ್ ಉಪಸ್ಥಿತರಿದ್ದರು.