ದೇಶದಲ್ಲಿಯೇ ಮೊದಲ ಬಾರಿಗೆ ವಿವಿ ಬಡ ಮಕ್ಕಳಗೆ ಮಧ್ಯಾಹ್ನದ ಊಟ
ತುಮಕೂರು: ಪ್ಲಾಸ್ಟಿಕ್‌ನಂತಹ ತ್ಯಾಜ್ಯ ವಸ್ತುಗಳಿಂದ ಮಾರಕ ಕಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದು ಪ್ಲಾಸ್ಟಿಕ್ ಮುಕ್ತ, ತ್ಯಾಜ್ಯ ಮುಕ್ತ ನಗರ ನಿರ್ಮಾಣಕ್ಕೆ ಸಾರ್ವಜನಿಕರು ಮುಂದಾಗಬೇಕು ಎಂದು ಮೈಸೂರು ಸಂಸ್ಥಾನದ ರಾಜವಂಶಸ್ಥ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಲಹೆ ನೀಡಿದರು.
ತುಮಕೂರು ವಿಶ್ವವಿದ್ಯಾನಿಲಯವು ಶ್ರೀ ರಾಮಕೃಷ್ಣ ಸೇವಾಶ್ರಮ ಪಾವಗಡ, ಶ್ರೀ ಅನ್ನಪೂರ್ಣೇಶ್ವರಿ ಆಹಾರ ವಿತರಣಾ ಸಮಿತಿ ಸಹಯೋಗದೊಂದಿಗೆ ದೇಶದಲ್ಲಿಯೇ ಮೊದಲ ಬಸರಿಗೆ ಆಯೋಜಿದ್ದ ‘ತುಮಕೂರು ವಿಶ್ವವಿ ದ್ಯಾಲಯದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಮಧ್ಯಾಹ್ನದ ಭೋಜನ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದು ತ್ಯಾಜ್ಯದ ಪ್ರಮಾಣ ಹೆಚ್ಚಾಗಿದೆ. ನಗರ, ಗ್ರಾಮೀಣ ಪ್ರದೇಶಗಳ ಹೊರಗಡೆ ತ್ಯಾಜ್ಯದ ರಾಶಿ ನಮ್ಮನ್ನು ಸ್ವಾಗತ ಮಾಡುತ್ತವೆ. ಇದರಿಂದ ಪರಿಸರ ಹಾಳಾಗುತ್ತಿದ್ದು ಎಚ್ಚರ ವಹಿಸುವುದು ಅಗತ್ಯವಾಗಿದೆ. ಕಳೆದ ೨೦ ರಿಂದ ೨೫ ವರ್ಷಗಳ ಈಚೆಗೆ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದ್ದು ಇದರಿಂದ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳು ಬರುತ್ತವೆ ಎಂದರು.
ನಮ್ಮ ಸ್ಥಳೀಯ ವಸ್ತುಗಳ ಬಳಕೆ ಮಾಡುವ ಮೂಲಕ ಪ್ಲಾಸ್ಟಿಕ್ ವಸ್ತುಗಳ ಬಳಕೆಗೆ ಕಡಿವಾಣ ಹಾಕಬೇಕಿದೆ. ವಿದ್ಯಾರ್ಥಿಗಳು ಮಾನಸಿಕವಾಗಿ ಸದೃಢರಾಗಬೇಕಾದರೆ ವಿದ್ಯೆಯ ಜತೆಗೆ ಆರೋಗ್ಯವೂ ಮುಖ್ಯ. ಪೌಷ್ಠಿಕಾಂಶ ಯುತ ಆಹಾರ ಸೇವನೆ ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದೆ. ಈ ಯೋಜನೆಯು ಸ್ಥಳೀಯ ಆಹಾರ ಪದ್ಧತಿ ಬಳಸಿಕೊಂಡು ರೈತರನ್ನು ಪ್ರೋತ್ಸಾಹಿಸು ವಂತಾಗಬೇಕು ಎಂದರು.
ಭ್ರಷ್ಟಾಚಾರ ಹೆಚ್ಚಾಗಲು ಸಮಾಜ ಕಾರಣ
ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಮಾತನಾಡಿ, ಎಲ್ಲ ಕಡೆ ಭ್ರಷ್ಟಚಾರ ಹೆಚ್ಚಾಗಿದೆ ಇದಕ್ಕೆ ಸಮಾಜ ಕಾರಣವೇ ಹೊರತು ವ್ಯಕ್ತಿ ಕಾರಣನಲ್ಲ. ಎಲ್ಲ ಕಡೆ ಹಣವೇ ಮುಖ್ಯವಾಗಿದ್ದು ಮಾನವೀಯತೆ ಮರೆಯಾಗಿದೆ. ನಾಡು ಸಮೃದ್ಧಿಯಿಂದ ಇರಬೇಕಾದರೆ ಉಳ್ಳವರ ಕೊಡುಗೆ ಅಗತ್ಯವಿದೆ. ಮಾನವೀಯತೆಯ ಅಂಶಗಳಿಗೆ ಸಾಕ್ಷಿಯಾಗಿ ಬಂದಿರುವ ಈ ಯೋಜನೆ ಮಧ್ಯಾಹ್ನದ ಊಟಕ್ಕಷ್ಟೇ ಸೀಮಿತವಾಗಬಾರದು. ಹಿರಿಯರು ಕಟ್ಟಿರುವ ಸಮಾಜದಲ್ಲಿ ಮೌಲ್ಯಯುತ ಬದುಕನ್ನು ನಿರೂಪಿಸುವುದು ವಿದ್ಯಾರ್ಥಿಗಳ ಜವಾಬ್ದಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ನಾಯಮೂರ್ತಿ ರತ್ನಕಲಾ, ಟೂಡ ಅಧ್ಯಕ್ಷ ಹೆಚ್.ಜಿ.ಚಂದ್ರಶೇಖರ್, ಎಸ್. ನಾಗಣ್ಣ ಮಾತನಾಡಿದರು. ಕುಲಸಚಿವೆ ನಾಹಿದಾ ಜ಼ಮ್‌ಜûಮ್, ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನಕುಮಾರ್ ಕೆ., ರಮೇಶ್ ಬಾಬು, ನಟರಾಜ ಶೆಟ್ಟಿ, ನಾಗರಾಜು, ಶ್ರೀನಿವಾಸ್, ಮಹೇಶ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.
ಜೈಲಿಗೆ ಹೋಗಿ ಬಂದವರಿಗೆ ಸನ್ಮಾನ
ಪ್ರಸ್ತುತ ಪರಿಸ್ಥಿತಿಯಲ್ಲಿ ಮಾನವೀಯತೆ ಮರೀಚಿಕೆಯಾಗಿದೆ. ತಪ್ಪುಗಳನ್ನು ಮಾಡಿ ಜೈಲಿಗೆ ಹೋಗಿ ಬಂದವರಿಗೆ ಸನ್ಮಾನ ಸಮಾರಂಭಗಳು ನಡೆಯುತ್ತಿವೆ ಎಂದು ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಹೇಳಿದರು. ಈ ಹಿಂದೆ ಯಾರಾದರೂ ಜೈಲಿಗೆ ಹೋಗಿ ಬಂದರೆ ಅವರನ್ನು ಗ್ರಾಮಗಳಿಂದ ಬಹಿಷ್ಕರದ ರೂಪದಲ್ಲಿ ಕಾಣಲಾಗುತ್ತಿತ್ತು. ಆದರೆ ಇಂದು ಜೈಲಿಗೆ ಹೋಗಿ ಬರುವುದು ಸರ್ವೇ ಸಾಮಾನ್ಯವಾಗಿದೆ. ಈ ಬಗ್ಗೆ ಪ್ರಶ್ನೆ ಮಾಡಲು ಹೊರಟರೆ ಗಾಂಧೀಜಿವರು ಜೈಲಿಗೆ ಹೋಗಿದ್ದರು ಎಂಬ ಉತ್ತರ ನೀಡುತ್ತಾರೆ ಎಂದರು.
*
ವಿದ್ಯಾಭ್ಯಾಸದ ಜತೆಗೆ ಆಹಾರ ನೀಡುವಂಥ ಶಕ್ತಿ ನಮ್ಮ ವಿವಿಗೆ ದೊರೆತಿರುವುದು ಭಾಗ್ಯವೇ ಸರಿ. ಸಾವಿರದ ಐನೂರು ವಿಧ್ಯಾರ್ಥಿಗಳಿಗೆ ಸತ್ವಭರತ ಆಹಾರ ನೀಡುವುದಕ್ಕೆ ಕೈಜೋಡಿಸಿದ ಎಲ್ಲರಿಗೂ ನನ್ನ ಧನ್ಯವಾದ.
ಪ್ರೊ. ವೆಂಕಟೇಶ್ವರಲು, ಕುಲಪತಿ.
ತುಮಕೂರು ನೂರಾರು ವರ್ಷಗಳಿಂದ ಜ್ಞಾನ ಮತ್ತು ಅನ್ನಕ್ಕೆ ಒತ್ತು ನೀಡಿ ದಾಸೋಹ ಮಾಡುತ್ತಾ ಬಂದಿದೆ. ಈ ನಾಡಿನ ಗುಣವೇ ಅಂಥದ್ದು. ನಮ್ಮ ಮಕ್ಕಳು ಹಸಿದು ಬಂದಾಗ ಅನ್ನ ನೀಡುವ ಅವಕಾಶ ನಮಗಿಂದು ದೊರೆತಿರುವುದು ಹೆಮ್ಮೆಯ ವಿಷಯ.
ಸಿದ್ದಲಿಂಗಸ್ವಾಮೀಜಿ, ಸಿದ್ದಗಂಗಾ ಮಠ.
ಕೃಷ್ಣಾರಾಜ ಒಡೆಯರ್ ಆಳಿದ ನಾಡಿನಲ್ಲಿ ಅನ್ನ ಸೇವೆ, ಜ್ಞಾನ ಸೇವೆಗೆ ಕೊರತೆಯೇ ಇಲ್ಲದಂತಾಗಿರುವುದು ನಮ್ಮ ಪುಣ್ಯ. ವಿವೇಕಾನಂದರು ಬಯಸಿದ ಯುವಜನತೆ ತುಮಕೂರು ವಿವಿಯಲ್ಲಿತಯಾರಾಗುತ್ತಿರುವುದು ದೇಶವೇ ತಿರುಗಿ ನೋಡುವ ಸಂಗತಿ. ಈ ಯೋಜನೆ ಭಾರತದಲ್ಲಿ ಮೊಟ್ಟಮೊದಲ ಪ್ರಯೋಗ.
ಜಪಾನಂದ ಸ್ವಾಮೀಜಿ, ಪಾವಗಡ.