Wednesday, 30th October 2024

Tumkur News: ಹೇಮಾವತಿ ಲಿಂಕ್ ಕೆನಾಲ್ ವಿರೋಧಿಸಿ ಬೃಹತ್ ಪಾದಯಾತ್ರೆಗೆ ತೀರ್ಮಾನಿಸಿದ ಹೋರಾಟ ಸಮಿತಿ

ಗುಬ್ಬಿ: ಜಿಲ್ಲೆಗೆ ಮರಣ ಶಾಸನ ಬರೆಯುವ ಹೇಮಾವತಿ ಲಿಂಕ್ ಕೆನಾಲ್ ಪೈಪ್ ಲೈನ್ ಕಾಮಗಾರಿ ಈಗಾಗಲೇ ಹೋರಾಟದ ಮೂಲಕ ಸ್ಥಗಿತಗೊಳಿಸಲಾಗಿದೆ. ಆದರೆ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸಿ ಕೆಲಸ ಪುನರ್ ಆರಂಭ ಮಾಡಲು ಮುಂದಾಗಿರುವುದು ರೈತರನ್ನು ಕೆರಳಿಸಿದೆ. ಈ ಹಿನ್ನಲೆ ಬೃಹತ್ ಮಟ್ಟದ ರೈತ ಹೋರಾಟಕ್ಕೆ ಲಿಂಕ್ ಕೆನಾಲ್ ವಿರೋಧಿ ಸಮಿತಿ ನಿರ್ಧರಿಸಿ ನಾಲೆಯ 70 ನೇ ಕಿಮೀನಿಂದ ತುಮಕೂರು ಕಡೆಗೆ ಪಾದಯಾತ್ರೆ ಯನ್ನು ಸಾವಿರಾರು ಟ್ರ್ಯಾಕ್ಟರ್ ಹಾಗೂ ಜೆಸಿಬಿ ಯಂತ್ರಗಳನ್ನು ತರುವ ಮೂಲಕ ನಡೆಸಲು ನಿರ್ಧಾರ ಕೈಗೊಳ್ಳಲಾಯಿತು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹೇಮಾವತಿ ಲಿಂಕ್ ಕೆನಾಲ್ ವಿರೋಧಿ ಸಮಿತಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಎಲ್ಲಾ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಜನ ಪ್ರತಿನಿಧಿಗಳು ಹಾಗೂ ರೈತಸಂಘದ ಸದಸ್ಯರು ಹಾಜರಿದ್ದು ಹೋರಾಟದ ಸ್ವರೂಪ ಮತ್ತು ಸರ್ಕಾರದ ಗಮನ ಸೆಳೆಯುವ ಮಟ್ಟಕ್ಕೆ ನಡೆಸಲು ನಿರ್ಧರಿಸ ಲಾಯಿತು.

ಸಮಿತಿಯ ನೇತೃತ್ವ ವಹಿಸಿರುವ ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ ಸಮಾಜದ ಪರ ನಿಲ್ಲುವವರು ನಾವುಗಳು. ತಪ್ಪು ಮಾಡಿರುವುದು ಸರ್ಕಾರ. ರೈತರ ಒಪ್ಪಿಗೆ ಇಲ್ಲದೆ ಅವೈಜ್ಞಾನಿಕ ಕೆಲಸಕ್ಕೆ ಮುಂದಾಗಿದ್ದಾರೆ. ಬೃಹತ್ ಹೋರಾಟದ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳೊಟ್ಟಿಗೆ ಮಾತನಾಡಿ ಕಾನೂನು ಕೈಗೆತ್ತಿಕೊಳ್ಳುವ ಅನಿವಾರ್ಯ ಎದುರಾಗಿದೆ ಎಂದು ಎಚ್ಚರಿಕೆ ನೀಡುತ್ತೇನೆ. ಕೇಂದ್ರ ಸಚಿವ ಸೋಮಣ್ಣ ಅವರು ಸಹ ನಮ್ಮ ಹೋರಾಟಕ್ಕೆ ಸಾಥ್ ನೀಡುತ್ತಾರೆ. ಶಾಸಕ ಸುರೇಶ್ ಗೌಡ ಕೂಡಾ ನಮ್ಮೊಟ್ಟಿಗೆ ನಿಲ್ಲಲಿದ್ದಾರೆ ಎಂದರು.

ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ನೀರಿಗಾಗಿ ಕೇಸ್ ಹಾಕಲಿ ಬಿಡಿ. ಯಾರು ಎದೆಗುಂದದೆ ಹೋರಾಟ ನಡೆಸೋಣ. ಬರುವಾಗ ಜೊತೆಯಲ್ಲಿ ಯಡೆಮಟ್ಟೆ ತೆಗೆದುಕೊಂಡು ಬನ್ನಿ. ಪೊಲೀಸರನ್ನೇ ಅಟ್ಟಾಡಿಸೋಣ. ನಮ್ಮ ನೀರಿಗಾಗಿ ಪೊಲೀಸರು ಹೋರಾಟಕ್ಕೆ ಸಹಕಾರ ನೀಡಬೇಕಿದೆ. ಅವರಿಗೂ ನೀರು ಬೇಡವೇ, ಅವರು ರೈತರ ಮಕ್ಕಳು ಅಲ್ಲವೇ ಎಂದು ಪ್ರಶ್ನಿಸಿ ತಾಂತ್ರಿಕ ಸಮಿತಿ ಸಭೆಯಲ್ಲಿ ಸಚಿವ ಡಿಕೆಶಿ ಅವರಿಗೆ ನೇರವಾಗಿ ಖಂಡಿಸಿ ಈ ಕೆಲಸ ಪೂರ್ಣ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದೇನೆ. ಸಾವಿರಾರು ರೈತರು ಒಟ್ಟಿಗೆ ನುಗ್ಗೋಣ ಕೆಲಸ ನಿಲ್ಲಿಸೋಣ ಎಂದು ಕರೆ ನೀಡಿದರು.

ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ ರಾತ್ರೋರಾತ್ರಿ ಪೈಪ್ ತಂದು ಇಳಿಸಿ ಕೆಲಸ ಆರಂಭಿಸಿ ದ್ದರು. ಕೂಡಲೇ ರೈತರೊಂದಿಗೆ ಸ್ಥಳಕ್ಕೆ ತೆರಳಿ ಕೆಲಸ ನಿಲ್ಲಿಸಿದ್ದೇವೆ. ಈ ಬಗ್ಗೆ ಗುಬ್ಬಿ ಶಾಸಕರು ಡಿವೈಎಸ್ಪಿ ಜೊತೆ ಮಾತನಾಡಿದ್ದೇನೆ ಎಂದಿದ್ದರು. ಆದರೆ ರೈತರ ಪರ ನಿಲ್ಲಲು ಹೇಳದೇ ಗುತ್ತಿಗೆದಾರರ ಪರ ನಿಲ್ಲಲು ಹೇಳಿದ್ದಾರೆ ಎಂದು ತಡವಾಗಿ ಅರಿವಾಗಿದೆ ಎಂದು ವ್ಯಂಗ್ಯವಾಡಿ ಜೈಲ್ ಭರೋ ನಡೆಸಲು ನಮ್ಮ ರೈತರು ಸಿದ್ಧರಿದ್ದಾರೆ. ತಾಲ್ಲೂಕಿನ 50 ಸಾವಿರ ಮನೆಯಿಂದ ಒಬ್ಬರಂತೆ ಆರು ತಾಲ್ಲೂಕಿನ ರೈತರನ್ನು ಜೈಲಿಗೆ ಹಾಕಬೇಕಿದೆ ಎಂದು ಎಚ್ಚರಿಕೆ ನೀಡಿದರು.

ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ ಜಿಲ್ಲೆಯಲ್ಲಿ ಪ್ರಭಾವಿ ಸಚಿವರು, ಶಾಸಕರು ಇದ್ದು ರೈತರು ಹೋರಾಟಕ್ಕೆ ಬಂದಿದ್ದು ವಿಪರ್ಯಾಸ. ಪ್ರಭಾವಿಗಳು ರಾಜೀನಾಮೆ ಕೊಡುವ ಹೇಳಿಕೆ ನೀಡಿದ್ದರೆ ಈ ಕೆಲಸ ನಡೆಯುತ್ತಿರಲಿಲ್ಲ. ನಮ್ಮ ಗುಬ್ಬಿ ಶಾಸಕರಿಗೆ ನೀರಾವರಿ ಬಗ್ಗೆ ಇಚ್ಛಾಶಕ್ತಿ ಇಲ್ಲ. 25 ವರ್ಷದಿಂದ ಯಾವುದೇ ನೀರಾವರಿ ಕೆಲಸ ತಂದಿಲ್ಲ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ ಜಿಲ್ಲೆಯ ರೈತರ ಹಿತಾಸಕ್ತಿ ಕಾಪಾಡುವ ಹೊಣೆ ಹೊತ್ತ ಜನಪ್ರತಿನಿಧಿಗಳು, ಕಾಂಗ್ರೆಸ್ ಪಕ್ಷದ ಮುಖಂಡರು ಸರ್ಕಾರಕ್ಕೆ ಮನದಟ್ಟು ಮಾಡಿ ಈ ಯೋಜನೆ ಕೈ ಬಿಡಲು ಹೇಳುವ ಧೈರ್ಯವೇ ಕಾಣುತ್ತಿಲ್ಲ. ಹೀಗೆ ಮುಂದುವರೆದರೆ ರೈತರೇ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಸಭೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜು, ತಾಲ್ಲೂಕು ಅಧ್ಯಕ್ಷ ವೆಂಕಟೇಗೌಡ, ಬಿಜೆಪಿ ಜಿಲ್ಲಾ ಉಪಾ ಧ್ಯಕ್ಷ ಭೈರಪ್ಪ, ತಾಲ್ಲೂಕು ಅಧ್ಯಕ್ಷ ಪಂಚಾಕ್ಷರಿ, ನಂಜೇಗೌಡ, ಕನ್ನಡಸೇನೆ ಜಿಲ್ಲಾಧ್ಯಕ್ಷ ಧನಿಯಕುಮಾರ್, ಕನ್ನಡ ಪ್ರಕಾಶ್, ಕರ್ನಾಟಕ ರೈತ ಸಂಘದ ಬಸವರಾಜು, ಶಬ್ಬೀರ್ ಅಹ್ಮದ್, ರಾಮಚಂದ್ರರಾವ್, ಕನ್ನಡ ಪ್ರಕಾಶ್, ರಾಮಣ್ಣ, ವಿನಯಕುಮಾರ್, ಸಿ.ಆರ್. ಶಂಕರ್ ಕುಮಾರ್, ಲೋಕೇಶ್, ಪಪಂ ಸದಸ್ಯರಾದ ಜಿ.ಆರ್.ಶಿವಕುಮಾರ್, ಅಣ್ಣಪ್ಪಸ್ವಾಮಿ, ಬಲರಾಮಯ್ಯ, ತಿರುಮಲೇಶ್ ಇತರರು ಇದ್ದರು.