Thursday, 12th December 2024

Tumkur News: ರೈತರ ಸಮಸ್ಯೆಗಳಿಗೆ ನೆರವಾಗಲು ಹಿತರಕ್ಷಣಾ ಸಮಿತಿ ಅಸ್ತಿತ್ವಕ್ಕೆ-ವಕೀಲ ರಮೇಶ್ ನಾಯ್ಕ್

ತುಮಕೂರು: ಸ್ಥಳೀಯ ರೈತರ ಸಮಸ್ಯೆಗಳನ್ನು ಇಲಾಖೆ ಹಂತದಲ್ಲಿ, ಅಗತ್ಯವಿದ್ದರೆ ಕಾನೂನು ಮಟ್ಟದಲ್ಲಿ ಬಗೆಹರಿಸುವ ಮೂಲಕ ರೈತರ ಸಮಸ್ಯೆಗಳಿಗೆ ಧ್ವನಿಯಾಗುವ ಆಶಯದಿಂದ ಹಾಗೂ ಪ್ರಕೃತಿ, ಅರಣ್ಯ, ಜೀವ ವೈವಿಧ್ಯತೆ ಸಂರಕ್ಷಣೆಯ ಆಶಯದೊಂದಿಗೆ ಕರ್ನಾಟಕ ಪ್ರಗತಿಪರ ರೈತರ ಹಾಗೂ ದೇವರಾಯನದುರ್ಗ ಜೀವವೈವಿಧ್ಯತೆಗಳ ಹಿತರಕ್ಷಣಾ ಸಮಿತಿ ಅಸ್ತಿತ್ವಕ್ಕೆ ಬಂದಿದೆ ಎಂದು ವಕೀಲ ರಮೇಶ್ ನಾಯ್ಕ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರೈತರು ಈ ದೇಶದ ಬೆನ್ನೆಲುಬು ಎನ್ನಲಾಗುತ್ತದೆ. ಆದರೆ ರೈತರ ಸಮಸ್ಯೆ ವಿಚಾರ ಬಂದಾಗ ಅದರಿಂದ ವಿಮುಖರಾಗುವವರೇ ಹೆಚ್ಚು. ರೈತರ ಕಷ್ಟ, ತೊಂದರೆಗಳು ರೈತರಾಗಿ ಅನು ಭವಿಸಿದವರಿಗೇ ಗೊತ್ತು, ಅನೇಕ ಕಾರಣಗಳಿಂದಾಗಿ ರೈತರು ತಮ್ಮ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪರದಾಡಬೇಕಾಗುತ್ತದೆ. ಇಂತಹ ರೈತರ ಧ್ವನಿಯಾಗಿ ಸಮಿತಿ ಕಾರ್ಯನಿರ್ವಹಿಸುತ್ತದೆ ಎಂದರು.

ಮಣ್ಣು ಹಾಗೂ ನೀರು ಕೃಷಿಯ ಜೀವ ಸೆಲೆ, ಇವುಗಳ ರಕ್ಷಣೆ ಆಗಬೇಕು. ಜತೆಗೆ ಪ್ರಕೃತಿಯ ಜೀವವೈವಿಧ್ಯತೆಗಳೂ ಕೃಷಿಗೆ ಪೂರಕವಾಗಿರುತ್ತವೆ. ಈ ಸ್ಥಿತಿಯಲ್ಲಿ ಮಣ್ಣು, ನೀರು, ಜೀವವೈವಿದ್ಯತೆಗಳ ರಕ್ಷಣೇ ಆಗಲೇಬೇಕಾಗಿದೆ. ದೇವರಾಯನದುರ್ಗದಲ್ಲಿ ಜೀವವೈವಿಧ್ಯತೆಗಳನ್ನು ನಮ್ಮ ಪೂರ್ವಿಕರು ಕಾಪಾಡಿಕೊಂಡು ಬಂದಿದ್ದಾರೆ, ನಾವೂ ರಕ್ಷಣೆ ಮಾಡಬೇಕು. ರೈತರ, ಕೃಷಿಗೆ ನೆರವಾಗುವಂತಹ ಕೆಲಸಗಳು, ಎದುರಾಗುವ ಸಮಸ್ಯೆಗಳನ್ನು ನಾವೇ ನಿವಾರಿಸಿಕೊಳ್ಳುವ ರೀತಿಯಲ್ಲಿ ನಮ್ಮ ಸಮಿತಿ ತುಮಕೂರು ತಾಲ್ಲೂಕಿನಲ್ಲಿ 48 ಗ್ರಾಮಗಳಲ್ಲಿ ರೈತರಲ್ಲಿ ಅರಿವು ಮೂಡಿಸಿದೆ, ಈ ಪೈಕಿ ೨೩ ಹಳ್ಳಿಗಳಲ್ಲಿ ರೈತರ ಒಕ್ಕೂಟ ರಚಿಸಲಾಗಿದೆ ಎಂದು ಹೇಳಿದರು.

ತುಮಕೂರು ತಾಲ್ಲೂಕಿನಲ್ಲಿ ಈಗಾಗಲೇ ತನ್ನ ಕಾರ್ಯಚಟುವಟಿಕೆ ಆರಂಭಿಸಿರುವ ಕರ್ನಾಟಕ ಪ್ರಗತಿಪರ ರೈತರ ಹಾಗೂ ದೇವರಾಯನದುರ್ಗ ಜೀವ ವೈವಿಧ್ಯತೆಗಳ ಹಿತರಕ್ಷಣಾ ಸಮಿತಿಯನ್ನು ಬರುವ ಅಕ್ಟೋಬರ್ ೨೭ರಂದು ತುಮಕೂರಿನಲ್ಲಿ ನಡೆಯುವ ಸಮಾರಂಭದಲ್ಲಿ ರಾಜ್ಯ ಕೃಷಿ ಸಚಿವ ಚೆಲುವರಾಯಸ್ವಾಮಿ ಉದ್ಘಾಟಿಸುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಬಂಡಿಹಳ್ಳಿ ಬಿ.ಆರ್.ರವೀಂದ್ರ, ಮೈದಾಳ ಗ್ರಾಮ ಪಂಚಾಯ್ತಿ ಸದಸ್ಯ ನರಸಿಂಹಮೂರ್ತಿ, ಉಪನ್ಯಾಸಕ ರಾಜಕುಮಾರ್, ಸದಸ್ಯರಾದ ಪುಟ್ಟರಾಜು ಉಪಸ್ಥಿತರಿದ್ದರು. ಸುದ್ದಿಗೋಷ್ಠಿಯಲ್ಲಿ ವಕೀಲ ರಮೇಶ್ ನಾಯ್ಕ್ ಮಾತನಾಡಿದರು.

ಇದನ್ನೂ ಓದಿ: Tumkur News: ಒಂದು ತಿಂಗಳ ಕಾಲ ಉಚಿತ ಹೃದಯ ತಪಾಸಣಾ ಮಾಸಾಚಾರಣೆ